ಸಾರಾಂಶ
ಚಿಕ್ಕಮಗಳೂರು, ಬಲಾಢ್ಯ ಜಾತಿಗಳಲ್ಲಿ ಜನಿಸಿದರೆ ಮಾತ್ರ ಸ್ವರ್ಗ ದೊರಕದು. ಪರೋಪಕಾರಿ ಗುಣ ಇರುವವರಿಗೆ ಪುಣ್ಯ, ಪರ ಪಿಡುಕನಿಗೆ ನರಕ ಎಂಬುದು ಸನಾತನ ಧರ್ಮದಲ್ಲಿದೆ. ಸನ್ನಡತೆ, ಸದ್ವಿಚಾರಗಳಿಂದ ಕೂಡಿರುವ ಮನುಷ್ಯ ದೊಡ್ಡ ವ್ಯಕ್ತಿಯಾಗಲು ಸಾಧ್ಯ, ಜಾತಿಗಳಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್‌ನ ಬೆಳ್ಳಿ ಮಹೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಲಾಢ್ಯ ಜಾತಿಗಳಲ್ಲಿ ಜನಿಸಿದರೆ ಮಾತ್ರ ಸ್ವರ್ಗ ದೊರಕದು. ಪರೋಪಕಾರಿ ಗುಣ ಇರುವವರಿಗೆ ಪುಣ್ಯ, ಪರ ಪಿಡುಕನಿಗೆ ನರಕ ಎಂಬುದು ಸನಾತನ ಧರ್ಮದಲ್ಲಿದೆ. ಸನ್ನಡತೆ, ಸದ್ವಿಚಾರಗಳಿಂದ ಕೂಡಿರುವ ಮನುಷ್ಯ ದೊಡ್ಡ ವ್ಯಕ್ತಿಯಾಗಲು ಸಾಧ್ಯ, ಜಾತಿಗಳಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ಸವಿತಾ ಸಮಾಜ ಸೇವಾ ಟ್ರಸ್ಟ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನ ಆತ್ಮದಲ್ಲಿ ದೇವರು ನೆಲೆಸಿರುತ್ತಾನೆ. ನಮ್ಮೊಳಗೆ ಎಂದಿಗೂ ಕೀಳರಿಮೆ ಇರಕೂಡದು. ಒಂದು ಕಾಲದಲ್ಲಿ ರಾಜ ಮಹಾರಾಜರಿಗೆ ದೊರಕದ ದೇವರ ದರ್ಶನ, ಬೇಡರ ಕಣ್ಣಪ ಭಕ್ತಿಗೆ ಒಲಿದು ಪರಮಶಿವ ಪ್ರತ್ಯಕ್ಷನಾದನು. ಶ್ರೀ ರಾಮನು ಶಬರಿ ಭಕ್ತಿಗೆ ಮೆಚ್ಚಿ ಎಂಜಲು ತಿಂದರೆ ಹೊರತು ಜಾತಿಯಿಂದಲ್ಲ ಎನ್ನುವ ಸತ್ಯ ಅರಿಯಬೇಕು ಎಂದು ತಿಳಿಸಿದರು.ಜಗದ ಒಳಿತಿಗಾಗಿ ಶ್ರಮಿಸಿದ ಸವಿತಾ ಮಹರ್ಷಿ ಗುರುಗಳು, ಬಿ.ಆರ್.ಅಂಬೇಡ್ಕರ್, ವಿವೇಕಾನಂದರು ಉತ್ತಮ ವಿಚಾರಧಾರೆ ಗಳಿಂದ ಇಂದಿಗೂ ನೆನೆಸುವಂಥ ಕೆಲಸ ಮಾಡಲಾಗುತ್ತಿದೆ ಹೊರತು ಅಧಿಕಾರ ಅಥವಾ ಅಂತಸ್ತಿನಿಂದಲ್ಲ. ಮನುಷ್ಯ ಅರ್ಜಿ ಸಲ್ಲಿಸಿ ಜನಿಸಲು ಸಾಧ್ಯವಿಲ್ಲ. ಹುಟ್ಟಿದ ನಂತರ ಬೆಳವಣಿಗೆಯತ್ತ ಸಾಗಬೇಕು ಹೊರತು, ಜಾತಿಯಿಂದ ಗುರುತಿಸಬಾರದು ಎಂದರು.ಅನಾದಿಕಾಲದಲ್ಲಿ ಋಷಿಮುನಿಗಳ ಮುಂದೆ ರಾಜರು ತಲೆಬಾಗುತ್ತಿದ್ದರು. ಇಂದು ಮನುಷ್ಯ ಬದುಕಿನಲ್ಲಿ ಸುಂದರವಾಗಿ ಕಾಣಲು ಕ್ಷೌರಿಕ ಅಂಗಡಿಗಳಲ್ಲಿ ತಲೆಬಾಗುತ್ತಾನೆ. ಸಮಾಜದಲ್ಲಿ ಪ್ರತಿಯೊಂದು ಜನಾಂಗಕ್ಕೂ ಬದುಕುವ ಹಕ್ಕಿದೆ. ಯಾರಿಂದಲೂ ಕಿತ್ತು ಕೊಳ್ಳಲು ಸಾಧ್ಯವಿಲ್ಲ, ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ದಡಿ ನಾವುಗಳು ಒಂದು ಎಂಬುದು ಸಾಬೀತುಪಡಿಸಬೇಕು ಎಂದು ಹೇಳಿದರು.ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಸದಸ್ಯ ನರೇಶ್‌ಕುಮಾರ್ ಮಾತನಾಡಿ, ಸವಿತಾ ಬಂಧುಗಳು ಸರ್ಕಾರಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪ್ರತಿ ಅಂಗಡಿಗಳಲ್ಲಿ ಸೌಲಭ್ಯದ ಕರಪತ್ರಗಳು ಹಾಕಿ ಜನಾಂಗಕ್ಕೆ ತಿಳಿ ಹೇಳುವ ಮೂಲಕ ಸವಿತಾ ಸಮಾಜಕ್ಕೆ ಮೀಸಲಿರಿಸಿರುವ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಇತ್ತೀಚೆಗೆ ಕ್ಷೌರಿಕ ವೃತ್ತಿ ಯಲ್ಲಿರುವ ಜನಾಂಗವನ್ನು ಅಸ್ಪೃಶ್ಯರೆಂದು ಭಾವಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ಏಳೂವರೆ ದಶಕಗಳು ಕಳೆದರೂ ಅಸ್ಪೃಶ್ಯರಿಗೆ ಇಂದಿಗೂ ಕೆಲವು ಬಡಾವಣೆಗಳಲ್ಲಿ ದಲಿತ ಸಮುದಾಯಕ್ಕೆ ಬಾಡಿಗೆಗೆ ಮನೆಗಳನ್ನು ಕೊಡುತ್ತಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ನದಿಗಳ ನೀರು ಎಲ್ಲೆಡೆ ಹರಿದು ಕೊನೆಗೆ ಸಮುದ್ರಕ್ಕೆ ಸೇರಿದಂತೆ, ಎಲ್ಲಾ ಹಿಂದುಳಿದ ವರ್ಗಗಳು ಫಲವತ್ತತೆ ಹೊಂದಿ ಕೊನೆಗೆ ಹಿಂದೂ ಮಹಾಸಾಗರಕ್ಕೆ ಸೇರ್ಪಡೆಗೊಂಡು ಗಟ್ಟಿತನ ಮೆರೆಯಬೇಕು. ಎಲ್ಲಾ ಹಿಂದೂಗಳು ಒಂದೇ ಎಂಬ ಸಂಕಲ್ಪ ಹೊಂದಿದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದು ಹೇಳಿದರು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸವಿತಾ ಸಮಾಜದ ಹಿರಿಯ ಸದಸ್ಯರಾದ ಐದು ಮಂದಿಗೆ ಬಾಲಾಜಿ ವಿಗ್ರಹ ನೀಡುವ ಮೂಲಕ ಗೌರವಿಸಿದರು. ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ರಾಜ್ಯ ತಜ್ಞ ಮೌಲ್ಯ ನಿರ್ಧರಣಾ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ತಾಲೂಕು ಸವಿತಾ ಸಮಾಜ ಅಧ್ಯಕ್ಷ ಸಿ.ಎಂ.ಯೋಗೀಶ್, ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಉಪಸ್ಥಿತರಿದ್ದರು.7 ಕೆಸಿಕೆಎಂ 7ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ಸವಿತಾ ಸಮಾಜ ಸೇವಾ ಟ್ರಸ್ಟ್‌ನ ಬೆಳ್ಳಿ ಮಹೋತ್ಸವವನ್ನು ಕೆ.ಟಿ. ರಾಧಾಕೃಷ್ಣ ಉದ್ಘಾಟಿಸಿದರು. ಸಿ.ಟಿ. ರವಿ, ವೆಂಕಟೇಶ್, ಹಿರೇಮಗಳೂರು ಕಣ್ಣನ್, ಸೂರಿ ಶ್ರೀನಿವಾಸ್ ಇದ್ದರು.