ಸಾರಾಂಶ
ರಾಜ್ಯದಲ್ಲಿ 106 ಸರ್ಕಾರಿ, 44 ಅನುದಾನಿತ ಹಾಗೂ 141ಕ್ಕೂ ಅಧಿಕ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಹೊರತರಲು ಸರ್ಕಾರ ಇದೀಗ ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಜ್ಯ ಮಟ್ಟದ 45ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ ಉದ್ಘಾಟನೆ ಹಾಗೂ ಕರ್ನಾಟಕ ಪಾಲಿಟೆಕ್ನಿಕ್ ಅಮೃತ ಮಹೋತ್ಸವ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 106 ಸರ್ಕಾರಿ, 44 ಅನುದಾನಿತ ಹಾಗೂ 141ಕ್ಕೂ ಅಧಿಕ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಹೊರತರಲು ಸರ್ಕಾರ ಇದೀಗ ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ)ನ ಹಳೆ ವಿದ್ಯಾರ್ಥಿಗಳು 3 ಕೋಟಿ ರು. ವೆಚ್ಚದಲ್ಲಿ ಕಾಲೇಜು ಆವರಣದಲ್ಲಿ ಅಮೃತ ಭವನ ನಿರ್ಮಾಣ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಸಚಿವ ಎಂ.ಸಿ. ಸುಧಾಕರ್ ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕ್ರೀಡಾಕೂಟಗಳು ಸಾಧನೆಗೆ ಪ್ರೇರಣೆಯಾಗಲಿವೆ. ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಶಾಸಕ ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮೇಯರ್ ಮನೋಜ್ ಕುಮಾರ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನ ಎಚ್., ಜಂಟಿ ನಿರ್ದೇಶಕ (ಆಡಳಿತ) ಸುರೇಶ್ ಕುಮಾರ್ ಕೆ.ಎಂ., ಆಡಳಿತಾಧಿಕಾರಿ ರಜನಿಕಾಂತ್, ಜಂಟಿ ನಿರ್ದೇಶಕ (ಸಿಡಿಸಿ ಮತ್ತು ಪರೀಕ್ಷೆ) ಶೇಖರ್, ಉಪನಿರ್ದೇಶಕರು (ಯೋಜನೆ) ನಾಗಭೂಷಣ ಕೆ.ಜಿ., ಡಾ.ಮಾರುತಿ ಜಿ.ಎಸ್., ವೈ.ಎನ್. ದೊಡ್ಡಮನಿ ಮೊದಲಾದವರಿದ್ದರು. ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಬಾಬು ವಂದಿಸಿದರು.