ಸಾರಾಂಶ
2 ಕೋಟಿ ವೆಚ್ಚದಲ್ಲಿ ಸಹಕಾರಿ ಸಮುದಾಯ ಭವನವನ್ನು ನಿರ್ಮಾಣದ ಉದ್ದೇಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಪ್ರತಿಷ್ಠಿತ ಟೌನ್ ಕೋ ಆಪರೇಟಿವ್ ಸೊಸೈಟಿಗೆ ಸತತ ಐದನೇ ಬಾರಿಗೆ ನಿಶಾನಿ ಜಯಣ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ 12 ಜನ ನಿರ್ದೇಶಕರ ತಂಡ ಜಯಣ್ಣ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರನ್ನಾಗಿ ಪುಷ್ಪವಲ್ಲಿ ಅವರನ್ನು ಆಯ್ಕೆ ಮಾಡಿಕೊಂಡರು.ಸೊಸೈಟಿಗೆ ಐದನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಸಾಮಾನ್ಯ ಸಭೆಯ ಒಳಗಾಗಿ ಸೊಸೈಟಿಯ ಮೇಲೆ ಇರುವ ಜಾಗದಲ್ಲಿ ಎರಡು ಕೋಟಿ ರುಪಾಯಿ ವೆಚ್ಚದ ಸಹಕಾರ ಸಮುದಾಯ ಭವನವನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೇ ಸದಸ್ಯರಿಗೆ ಶೇ.2್5 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.
1912ರಲ್ಲಿ ಹಾಸನದ ತಿರುಮಲಚಾರ್ಯರು ಸೊಸೈಟಿಯನ್ನು ಸ್ಥಾಪನೆ ಮಾಡಿದ್ದಾರೆ. ಮಾಜಿ ರಾಜ್ಯಪಾಲ ನಿಟ್ಟೂರು ಶ್ರೀನಿವಾಸ್ ಅಯ್ಯಂಗಾರ್, ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್, ಟಿ.ಎಂ.ಕೆ.ಪೀರ್ ಸಾಬ್, ಜೈನಲ್‍ವುದ್ದೀನ್ ಸಾಬ್, ಭೋಜರಾಜ್, ಪಟೇಲ್ ಚಂದ್ರಶೇಖರಪ್ಪ, ಪಿ.ಸಿ ಜಯ್ಯಣ್ಣ, ಲಕ್ಷ್ಮಮ್ಮ ಸೇರಿದಂತೆ ಇತರರು ಈ ಸೂಸೈಟಿಯ ಆಡಳಿತ ಮುನ್ನಡೆಸಿದ್ದಾರೆ.ಪ್ರಾರಂಭದಲ್ಲಿ ಉತ್ತಮವಾದ ಸ್ಥಿತಿಯಲ್ಲಿದ್ದ ಸೋಸೈಟಿ ಕಾಲಕ್ರಮೇಣ ಕೆಲವರ ಕೈಗೆ ಸಿಕ್ಕು ನರಳಿ ನಷ್ಠ ಅನುಭವಿಸಿತು. 2005 ರಿಂದ ನಾವು ಅಧಿಕಾರ ಹಿಡಿಯುವವರೆಗೂ 1.50 ಕೋಟಿ ಸೊಸೈಟಿ ನಷ್ಠದಲ್ಲಿತ್ತು ಎಂದರು.
ಸೊಸೈಟಿಯ ಸುತ್ತಾ-ಮುತ್ತ ಡಬ್ಬದ ಅಂಗಡಿಗಳು ಹೆಚ್ಚಾಗಿದ್ದವು. ಇವುಗಳ ಎತ್ತಂಗಡಿ ಮಾಡಿ ವಾಣಿಜ್ಯ ಸಮುಚ್ಚಯ ನಿರ್ಮಿಸಿ ಸೊಸೈಟಿಯ ಲಾಭದತ್ತ ಮುನ್ನಡೆಸಲಾಯಿತು. ಸುಮಾರು 2.50 ಕೋಟಿ ವೆಚ್ಚದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡಲಾಯಿತು. ಈಗ ಪ್ರತಿ ತಿಂಗಳು 3 ರಿಂದ 4 ಲಕ್ಷ ಹಾಗೂ ಇತರೆ ಮೂಲಗಳಿಂದ ಸುಮಾರು 2 ರಿಂದ 2.50 ಲಕ್ಷರು ಸೊಸೈಟಿಗೆ ಆದಾಯ ಬರುತ್ತಿದೆ ಎಂದು ಜಯಣ್ಣ ಹೇಳಿದರು.ಡಿಸಿಸಿ ಬ್ಯಾಂಕ್ ನಲ್ಲಿ ಸೊಸೈಟಿಯ ಪ್ರಗತಿಗಾಗಿ 50 ಲಕ್ಷ ರು.ಗಳನ್ನು ಸಾಲವಾಗಿ ಪಡೆಯಲಾಗಿತ್ತು. ಅದನ್ನು ತೀರಿಸಿ ಈಗ ಸ್ವಂತ ಬಂಡವಾಳ ಹೊಂದಲಾಗಿದೆ. ಹಲವಾರು ಜನ ಸೊಸೈಟಿಯಲ್ಲಿ ತಮ್ಮ ಹಣವನ್ನು ಠೇವಣಿಯಾಗಿ ಇಟ್ಟಿದ್ದಾರೆ. ಇದರಲ್ಲಿ ಅವಧಿ ಸಾಲವಾಗಿ 50 ಸಾವಿರ, ವ್ಯವಹಾರಕ್ಕಾಗಿ ಮಧ್ಯಮ ವರ್ಗದವರಿಗೆ 1 ಲಕ್ಷ ರು ವರೆಗೂ ಸಾಲ ನೀಡಲಾಗುತ್ತಿದೆ. ನಾವು ಅಧ್ಯಕ್ಷರಾದ ಮೇಲೆ ಸದಸ್ಯರಿಗೆ ಡಿವಿಡೆಂಡ್ ನೀಡಲಾಗುತ್ತಿದೆ. ಕಳೆದ ಬಾರಿ ಶೇ. 16 ರಷ್ಟು ನೀಡಲಾಗಿತ್ತು ಎಂದರು.
ಈ ಚುನಾವಣೆಯಲ್ಲಿ ಎಲ್ಲಾ ಜನಾಂಗದವರಿಗೂ ಪ್ರಾತಿನಿಧ್ಯ ನೀಡಲಾಗಿದೆ. 12 ಜನ ನಿರ್ದೆಶಕ ಸ್ಥಾನದಲ್ಲಿ 10 ಜಾತಿಗೆ ಪ್ರಾತಿನಿಧ್ಯವನ್ನು ನೀಡಲಾಗಿದೆ ಎಂದು ನಿಶಾನಿ ಜಯ್ಯಣ್ಣ ತಿಳಿಸಿದರು. ಲಿಯಾಕತ್ ಅಲಿ ಖಾನ್, ಸಾಧೀಖ್ ಬಾಷಾ, ಜಿ.ಸುರೇಶ್ ಕುಮಾರ್(ಭಾಫ್ನಾ) ಜೆ.ಆರ್.ಹರೀಶ್, ಜೆ.ನಿಶಾನಿ ಧಶರಥ್, ಚಂದ್ರಪ್ಪ, ಓ.ತಿಪ್ಪೇಸ್ವಾಮಿ, ಶ್ರೀನಿವಾಸ್‍ಮೂರ್ತಿ, ಸೂರ್ಯ ಪ್ರಕಾಶ್ ಹಾಗೂ ಎ.ಚಂಪಕಾ ಈ ವೇಳೆ ಉಪಸ್ಥಿತರಿದ್ದರು.