ಹನೂರು ಪಟ್ಟಣದ ಜೀವನಾಡಿಯಾಗಿರುವ ತಟ್ಟೆ ಹಳ್ಳಕ್ಕೆ ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಪರಿಣಾಮ ಮಳೆಗಾಲದಲ್ಲಿ ಪ್ರವಾಹದ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು 15 ದಿನದೊಳಗೆ ನಾಲ್ಕು ಸೇತುವೆಗಳಿಗೆ ಶಾಶ್ವತ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ನೀಡದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿಗೆ ಬೃಹತ್ ಮುತ್ತಿಗೆ ಹಾಕಿ ಬೀಗ ಹಾಕುವುದು ಖಚಿತ ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಹನೂರು
ಹನೂರು ಪಟ್ಟಣದ ಜೀವನಾಡಿಯಾಗಿರುವ ತಟ್ಟೆ ಹಳ್ಳಕ್ಕೆ ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಪರಿಣಾಮ ಮಳೆಗಾಲದಲ್ಲಿ ಪ್ರವಾಹದ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು 15 ದಿನದೊಳಗೆ ನಾಲ್ಕು ಸೇತುವೆಗಳಿಗೆ ಶಾಶ್ವತ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ನೀಡದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿಗೆ ಬೃಹತ್ ಮುತ್ತಿಗೆ ಹಾಕಿ ಬೀಗ ಹಾಕುವುದು ಖಚಿತ ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ಎಚ್ಚರಿಕೆ ನೀಡಿದರು.ಪಟ್ಟಣದ ದೇವಾಂಗಪೇಟೆ, ಬಳೇಪೇಟೆ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾದ ಸ್ಥಳಕ್ಕೆ ಹಾಗೂ ಅವೈಜ್ಞಾನಿಕ ಸೇತುವೆ ಬಳಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಪಟ್ಟಣ ಪಂಚಾಯಿತಿ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಲೇ ಮಳೆಗಾಲದಲ್ಲಿ ತಟ್ಟೆ ಹಳ್ಳ ಸಮೀಪದ ನೂರಾರು ಮನೆಗಳಿಗೆ ನೀರು ನುಗ್ಗುತ್ತಿದೆ. ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿ ಮನೆಗಳಿಗೆ ಸೂಕ್ತ ರಕ್ಷಣೆ ನೀಡಬೇಕಾದ ಅಧಿಕಾರಿಗಳು ತಮ್ಮ ಮೂಲ ಕರ್ತವ್ಯವನ್ನೇ ಸಂಪೂರ್ಣವಾಗಿ ಮರೆತಿದ್ದಾರೆ ಎಂದರು.ಮಳೆಗಾಲ ಆರಂಭಕ್ಕೂ ಮುನ್ನವೇ ಹಳ್ಳ-ಕೊಳ್ಳಗಳನ್ನು ಸಮರ್ಪಕವಾಗಿ ಸ್ವಚ್ಛ ಮಾಡದೇ ಇರುವುದರಿಂದ ಸೇತುವೆಯ ಪೈಪ್‌ಗಳಲ್ಲಿ ಕಸ-ಕಡ್ಡಿ, ತ್ಯಾಜ್ಯ ತುಂಬಿಕೊಂಡು ನೀರಿನ ಹರಿವಿಗೆ ಅಡಚಣೆಯಾಗಿದೆ. ಹಳ್ಳದಲ್ಲಿ ನೀರು ಉಕ್ಕಿ ಹರಿದಾಗ ರಿವರ್ಸ್ ಆಗಿ ನೇರವಾಗಿ ಮನೆಗಳಿಗೆ ನುಗ್ಗುತ್ತಿದೆ. ಈ ಅವಘಡದಿಂದ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಕಳೆದ ಎರಡು ದಿನಗಳಿಂದ ಜನರು ಹೇಳತೀರದ ಸಂಕಷ್ಟ ಅನುಭವಿಸಿದ್ದಾರೆ ಎಂದು ಕಿಡಿಕಾರಿದರು.
ಒಂದು ಕೋಟಿ ರು. ವೆಚ್ಚದಲ್ಲಿ ಭದ್ರವಾದ ತಡೆಗೋಡೆ ನಿರ್ಮಿಸಿ ಹಳ್ಳಕ್ಕೆ ಹೊಸ ರೂಪ ನೀಡಿ ಶಾಶ್ವತ ಪರಿಹಾರ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ಚರಂಡಿ ರೂಪದಲ್ಲಿ ಅರೆಬರೆ ಅಭಿವೃದ್ಧಿಪಡಿಸಿ ಒತ್ತುವರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಸಹಕಾರ ನೀಡಿದ್ದಾರೆ ಎಂದು ದೂರಿದರು.ಅ.25ರ ನಂತರ ತೋಟದ ಜಮೀನುಗಳ ಮಾಲೀಕರು, ರೈತರು, ದೇವಾಂಗಪೇಟೆ, ಬಳೇಪೇಟೆ ನಿವಾಸಿಗಳು ಎಲ್ಲರೂ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೀಗ ಹಾಕುವುದು ಖಚಿತ. ಇದು ಕೊನೆಯ ಎಚ್ಚರಿಕೆ ಎಂದು ಗುಡುಗಿದರು.
ರೈತ ಮುಖಂಡ ಮಹೇಶ್ ಮಾತನಾಡಿ, ಶಾಸಕ ಮಂಜುನಾಥ್ ಅವರು ರೈತರ ಜಮೀನುಗಳನ್ನು ಅಭಿವೃದ್ಧಿಪಡಿಸಿ ಕೊಡುವುದಾಗಿ ಹೇಳಿ ಈಗಾಗಲೇ 8-10 ಬಾರಿ ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾರೆ. ಈ ಜಾಗವನ್ನು ಸರ್ವೆ ಮಾಡಿಸಿ ಇಲ್ಲಿ ಒಂದು ಚೆಕ್ ಡ್ಯಾಂ ಮಾಡೋಣ, ಇಲ್ಲೊಂದು ಸೇತುವೆ ಮಾಡೋಣ ಎಂದು ಕೇವಲ ಭರವಸೆ ನೀಡುತ್ತಿದ್ದಾರೆ. ಹೊರತು ಇದುವರೆಗೂ ಒಂದು ಇಟ್ಟಿಗೆಯನ್ನೂ ಇಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮುಖಂಡರಾದ ಸುಬ್ಬಣ್ಣ, ಜಗದೀಶ್, ಲೋಕಿ, ಮಹದೇವ ಪ್ರಭು, ಹರೀಶ್ ಮೋಹನ್, ಮಹದೇವ ಪ್ರಸಾದ್, ಸಿದ್ದಪ್ಪಾಜಿ, ನಾಯಕ ಕಾಮಗೆರೆ ಸುರೇಶ್ ಇತರರು ಹಾಜರಿದ್ದರು.