ನಿಟ್ಟೂರ(ಬಿ) ವೀರಭದ್ರೇಶ್ವರ ಶಾಲೆಗೆ ಮಕ್ಕಳ ಹಕ್ಕುಗಳರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ

| Published : Jun 23 2024, 02:12 AM IST

ನಿಟ್ಟೂರ(ಬಿ) ವೀರಭದ್ರೇಶ್ವರ ಶಾಲೆಗೆ ಮಕ್ಕಳ ಹಕ್ಕುಗಳರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಡೋದಾ ಗ್ರಾಮದಲ್ಲಿ ಶಿಕ್ಷಕನಿಂದ ಥಳಿತಕ್ಕೊಳಾದ ಮಗುವಿನ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ಮಾಡಿ ಮಗುವಿನ ಆರೋಗ್ಯ ವಿಚಾರಿಸಿದರು.

ಕನ್ನಡಪ್ರಭವಾರ್ತೆ ಭಾಲ್ಕಿ

ತಾಲೂಕಿನ ನಿಟ್ಟೂರ(ಬಿ) ಗ್ರಾಮದ ವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಶನಿವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಈ ಕುರಿತು ಕನ್ನಡಪ್ರಭ ಶನಿವಾರ ವರದಿ ಪ್ರಕಟ ಮಾಡಿದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಶನಿವಾರ ಶಾಲೆಗೆ ಭೇಟಿ ನೀಡಿದ ಅವರು, ಶಿಕ್ಷಕರು ಮಕ್ಕಳಿಗೆ ಹೊಡೆಯುವುದು, ಥಳಿಸುವುದು, ಹಲ್ಲೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಯಾವ ಆಧಾರದ ಮೇಲೆ ಶಿಕ್ಷಕರು ಮಗುವಿಗೆ ಥಳಿಸಿದ್ದಾರೆ. ಮಗುವಿಗೆ ಹೆಚ್ಚು ಕಡಿಮೆಯಾದರೆ ಯಾರೂ ಹೊಣೆ ಎಂದು ಪ್ರಶ್ನಿಸಿದರು. ಮಗುವಿನ ಮನೆಗೆ ಭೇಟಿ ನೀಡಿದ್ದು ಮಗುವಿನ ಬೆನ್ನು, ತೊಡೆ, ಕಾಲಿನ ಮೇಲೆ ಗಂಭೀರ ಸ್ವರೂಪದ ಗಾಯವಾಗಿವೆ.

ಮಗುವನ್ನು ಥಳಿಸುವ ಸಂದರ್ಭದಲ್ಲಿ ಉಳಿದ ಶಿಕ್ಷಕರು ತಡೆಯುವ ಪ್ರಯತ್ನ ಏಕೆ ಮಾಡಲಿಲ್ಲ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಕರಣ ಬೆಳಕಿಗೆ ಬಂದ ಮೇಲೆ ಥಳಿಸಿದ ಶಿಕ್ಷಕನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಆದರೆ ಘಟನೆ ನಡೆದು ಎರಡ್ಮೂರು ದಿನಗಳು ಕಳೆದರೂ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಕ್ರಮ ಜರುಗಿಸಲು ಏಕೆ ಹಿಂದೇಟು ಹಾಕಿದೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು ಶಾಲೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ವಿದ್ಯಾರ್ಥಿಗೆ ಥಳಿಸಿದ ದೃಶ್ಯಾವಳಿ ಸೆರೆಯಾದರೂ ಇದನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸೂಕ್ತ ತನಿಖೆ ನಡೆದರಷ್ಟೇ ಸತ್ಯಾಂಶ ಹೊರಬೀಳಲಿದೆ.

ಅದಲ್ಲದೇ ಶಾಲೆಯಲ್ಲಿ ವಿವಿಧ ತರಗತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿಲ್ಲದಿರುವುದು ಕಂಡು ಬಂದಿದೆ. ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ತರಗತಿ ಕೋಣೆಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕೂಡಿಸಿ ಪಾಠ ಮಾಡಲಾಗುತ್ತಿದೆ. ಶೆಡ್‌ಗಳಲ್ಲಿ ತರಗತಿ ನಡೆಸುವುದು, ಸೂಕ್ತ ಶೌಚಾಲಯ ಇಲ್ಲದಿರುವುದು, ಸುರಕ್ಷಿತ ಕ್ರಮಗಳನ್ನು ಅನುಸರಿಸದಿರುವುದು ಕಂಡು ಬಂದಿದೆ. ಇವೆಲ್ಲ ಮಾನದಂಡಗಳನ್ನು ಆಧರಿಸಿ ಕೂಡಲೇ ಶಾಲೆಗೆ ಶೋಕಾಸ್ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂದರ್ಭದಲ್ಲಿ ಡಿಡಿಪಿಐ ಸಲೀಂ ಪಾಶಾ, ಬಿಇಒ ಮನೋಹರ ಹೋಳ್ಕರ್, ಧನ್ನೂರಾ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವರಾಧ್ಯ ಇದ್ದರು.ಮಗುವಿನ ಮನೆಗೆ ಭೇಟಿ:

ಶಿಕ್ಷಕನಿಂದ ಥಳಿತಕ್ಕೊಳಾದ ಮಗುವಿನ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿದರು. ಕಮಲನಗರ ತಾಲೂಕಿನ ನಿಡೋದಾ ಗ್ರಾಮದ ಮಗುವಿನ ಮನೆಗೆ ಭೇಟಿ ನೀಡಿದ ಅವರು ಮಗುವಿನ ಆರೋಗ್ಯ ಪರಿಶೀಲಿಸಿ ಪಾಲಕರಿಗೆ ಧೈರ್ಯ ತುಂಬಿದರು.

ಕಾನೂನಿನ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಪಾಲಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ಮಗುವಿನ ರಕ್ಷಣೆ ಆಯೋಗ ನೋಡಿಕೊಳ್ಳಲಿದೆ ಎಂದು ಅಭಯ ನೀಡಿದರು.ಬೆಂಗಳೂರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಶಶಿಧರ ಕೋಸಂಬೆ ಮಾತನಾಡಿ, ಶಿಕ್ಷಕರು ಮಗುವನ್ನು ಥಳಿಸಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ತನಿಖೆ ವರದಿ ನಂತರ ಶಾಲೆಯ ಮಾನ್ಯತೆ ರದ್ದು ಪಡಿಸುವ ಬಗ್ಗೆ ಶಿಫಾರಸ್ಸು ಮಾಡಲಾಗುವುದು. ಮಗುವನ್ನು ಥಳಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು ಬಾಲ ನ್ಯಾಯ ಕಾಯ್ದೆಡಿ ದೂರು ದಾಖಲಿಸಿ ಚಾರ್ಚಶಿಟ್ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.