ಸಚಿವ ವೆಂಕಟೇಶ್ ಮನೆಗೆ ಮುತ್ತಿಗೆ ಯತ್ನ

| Published : Jan 15 2025, 12:48 AM IST

ಸಾರಾಂಶ

ಹಸುವಿನ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು, ಚೀಲದಲ್ಲಿ ಸಗಣಿ ತುಂಬಿಕೊಂಡು ಉದ್ಯಾನವನದ ಮುಂಭಾಗವಿರುವ ಸಚಿವರ ಮನೆಯ ಕಡೆಗೆ ಧಾವಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

3 ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ ಖಂಡಿಸಿ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಮನೆಗೆ ಮಂಗಳವಾರ ಮುತ್ತಿಗೆ ಹಾಕಿ, ಸಗಣಿ ಎರಚಲು ಮುಂದಾದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ನಿವೇದಿತಾನಗರ ‍ಉದ್ಯಾನವನ ಮುಂಭಾಗದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಹಸುವಿಗೆ ಎಳ್ಳು ಬೆಲ್ಲ ತಿನ್ನಿಸಿದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಸುಗಳ ಕೆಚ್ಚಲು ಕತ್ತರಿಸಿದ ವಿರುದ್ಧ ಸೂಕ್ತ ಕ್ರಮ ವಹಿಸಿಲ್ಲ. ಈ ಘಟನೆ ನಡೆದು ಎರಡು ದಿನ ಕಳೆದರೂ ಪಶುಸಂಗೋಪನ ಸಚಿವ ಕೆ. ವೆಂಕಟೇಶ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಸುವಿನ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು, ಚೀಲದಲ್ಲಿ ಸಗಣಿ ತುಂಬಿಕೊಂಡು ಉದ್ಯಾನವನದ ಮುಂಭಾಗವಿರುವ ಸಚಿವರ ಮನೆಯ ಕಡೆಗೆ ಧಾವಿಸಿದರು. ಈ ವೇಳೆ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.

ಈ ವೇಳೆ ರಸ್ತೆಯಲ್ಲೇ ತಾವು ತಂದಿದ್ದ ಸಗಣಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಗರು, ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಂಧಿಸಿ, ಪೊಲೀಸ್‌ ವಾಹನಗಳಲ್ಲಿ ಸಿಎಆರ್‌ ಮೈದಾನಕ್ಕೆ ಕರೆದೊಯ್ದರು. ನಂತರ ಬಿಡುಗಡೆಗೊಳಿಸಿದರು.

ಕಾನೂನು ಸುವ್ಯವಸ್ಥೆ ಹಾಳಾಗಿದೆ

ಈ ವೇಳೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ ಸರ್ಕಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಿಲ್ಲ. ಸಂಕ್ರಾಂತಿ ಹಬ್ಬದಂದು ನಾವೆಲ್ಲರೂ ಹಸುವನ್ನ ಪೂಜೆ ಮಾಡುತ್ತೇವೆ. ಹಸುವಿನ ಕೆಚ್ಚಲು ಕೊಯ್ದು ವಿಕೃತ ಮನಸ್ಥಿತಿಯನ್ನು ಕಿಡಿಗೇಡಿಗಳು ತೋರಿದ್ದಾರೆ ಎಂದು ಕಿಡಿಕಾರಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಆಗಿಲ್ಲ. ಅಧಿವೇಶನ ಒಳಗೆ ತೆರಳಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಆಗಲಿಲ್ಲ. ನೂರಾರು ಜನ ಮಧ್ಯರಾತ್ರಿವರೆಗೆ ಓಡಾಡುವ ಜಾಗದಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಅಂದರೆ ಏನು? ಈ ಸರ್ಕಾರದಲ್ಲಿ ನಾವು ಆರಾಮಾಗಿ ಇರಬಹುದು ಎಂದು ಕಿಡಿಗೇಡಿಗಳು ತಿಳಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಮುಡಾದಲ್ಲಿ ಹಗರಣ ಅಗಿದೆ, ಹಾಗೇಯೇ ನಗರ ಪಾಲಿಕೆಯಲ್ಲಿ 15 ಕೋಟಿ ಹಗರಣ ಆಗಿದೆ. ಈ ಅಧಿಕಾರಿಗಳಿಗೆ ಭಯವಿಲ್ಲ. ಯಾರು ಏನೇ ಮಾಡಿದರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂತಹ ಧೋರಣೆಗಳಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಜನರು ಇದರಿಂದ ಕಷ್ಟಪಡುವಂತಾಗಿದೆ ಎಂದು ಅವರು ದೂರಿದರು.

ಬಿಜೆಪಿ ‌ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪ ಮೇಯರ್ ಶೈಲೇಂದ್ರ, ರೈತ ಮೋರ್ಚಾದ ದೇವರಾಜೇಗೌಡ, ನವೀನ್ ಕುಮಾರ್, ಮುಖಂಡರಾದ ಶಂಕರ್, ಜಗದೀಶ್, ಗೆಜ್ಜಗಳ್ಳಿ ಮಹೇಶ್, ಮಿರ್ಲೆ ಶ್ರೀನಿವಾಸಗೌಡ, ಗಿರಿಧರ್, ಡಾ. ಅನಿಲ್ ಥಾಮಸ್, ಜೋಗಿ ಮಂಜು, ರಘು, ರಾಕೇಶ್ ಗೌಡ ಮೊದಲಾದವರು ಇದ್ದರು.

----

ಕೋಟ್...

ಹಸುವಿನ ಕೆಚ್ಚಲು ಕೊಯ್ದಿದಿರುವುದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಮೂರು ಹಸುವಿಗೆ ಆಗುವಷ್ಟು ಹಣವನ್ನು ಕೊಡುತ್ತೇವೆಂದು ಹೇಳುತ್ತಾರೆ. ಹಾಗಾದರೆ ಅವರ ಕತ್ತು ಕುಯ್ದು ಬೇರೆಯವರ ಕತ್ತು ಕೊಡುತ್ತೇವೆಂದರೆ ಒಪ್ಪಿಕೊಳ್ಳುತ್ತಾರಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಅಧಿಕಾರಿಗಳಿಗೆ ಭಯ ಎನ್ನುವದೇ ಇಲ್ಲ.

- ಎಲ್. ನಾಗೇಂದ್ರ, ಮಾಜಿ ಶಾಸಕ