ಕನ್ನಡಪ್ರಭ ವಾರ್ತೆ ಶಿರಾ

ಸರ್ಕಾರಿ ಗೋಮಾಳ ಭೂಮಿಯನ್ನು ಅನಗತ್ಯವಾಗಿ ಪ್ರವಾಸೋದ್ಯಮ, ಶಾಲೆ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಮನಸೋ ಇಚ್ಛೆ ನೀಡುತ್ತಿರುವುದು ಕುರಿಗಾಹಿಗಳಿಗೆ ಸಂಕಷ್ಟ ತಂದೊಡ್ಡಿದೆ. ಶಿರಾ ತಾಲೂಕಿನಲ್ಲಿ ಅತಿ ಹೆಚ್ಚು ಕುರಿ ಮತ್ತು ಮೇಕೆಗಳಿದ್ದು ಇವುಗಳಿಗೆ ಮೇವು ಪೂರೈಕೆ ಮಾಡಲು ಗೋಮಾಳ ಜಮೀನು ಉಳಿಸುವ ಅಗತ್ಯವಿದ್ದು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಗೋಮಾಳ ಜಮೀನು ಮಂಜೂರು ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಆಗ್ರಹಿಸಿದರು.

ಅವರು ಶಿರಾ ತಾಲೂಕು ಮಾರನಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ವಿಷಪೂರಿತ ಮೇವು ಸೇವನೆಯಿಂದ ಸುಮಾರು ೩೪ಕ್ಕೂ ಹೆಚ್ಚು ಕುರಿಗಳು ಅಕಾಲಿಕವಾಗಿ ಮರಣಹೊಂದಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರಿ ಆಕಸ್ಮಿಕ ಘಟನೆಯಿಂದ ಸತ್ತ ಕುರಿ ಮತ್ತು ಮೇಕೆಗಳಿಗೆ ಅನುಗ್ರಹ ಯೋಜನೆಯಲ್ಲಿ ೭೫೦೦ ರುಪಾಯಿ ಪರಿಹಾರ ನೀಡುತ್ತಿದ್ದು, ಈ ಪರಿಹಾರ ಮೊತ್ತವನ್ನು ೧೫ ಸಾವಿರಕ್ಕೆ ಏರಿಕೆ ಮಾಡಬೇಕು. ಘಟನೆಗೆ ನಿಖರವಾದ ಕಾರಣವನ್ನು ತಕ್ಷಣವೇ ಪತ್ತೆ ಹಚ್ಚಬೇಕು ಮತ್ತು ಬಾಕಿ ಇರುವ ಇತರ ಜಾನುವಾರುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾರನಗೆರೆ ಮಧುಸೂದನ್, ಸತೀಶ್ ಬಾಬು, ಮಹಾಲಿಂಗಪ್ಪ, ಮಾ ಸ್ನೇಹಪ್ರಿಯ ಶಿವು, ಶಿವಣ್ಣ, ಮಹಾಂತೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಪತ್ ಕುಮಾರ್ ಮತ್ತು ಪಶು ವೈದ್ಯಾಧಿಕಾರಿ ಡಾ.ರಮೇಶ್, ಮಹಾಲಿಂಗಪ್ಪ, ತಿಮ್ಮರಾಜು, ಮಹಾದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.