ಶೆಟ್ಟರನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಿಲ್ಲ ಎಂಬುದು ಅರ್ಥಹೀನ: ಲಾಡ್‌

| Published : Jan 27 2024, 01:18 AM IST

ಶೆಟ್ಟರನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಿಲ್ಲ ಎಂಬುದು ಅರ್ಥಹೀನ: ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ನ ಶಾಸಕರ ಸಂಖ್ಯೆ 136, ಬಿಜೆಪಿ-ಜೆಡಿಎಸ್‌ ಕೂಡಿಸಿದರೂ 85 ಸಂಖ್ಯೆ ಆಗುತ್ತದೆ. ಆಪರೇಷನ್‌ ಕಮಲ ಮಾಡಲು 53 ಶಾಸಕರು ಬೇಕಾಗುತ್ತದೆ. ಇದೆಲ್ಲ ಆಗದ ಮಾತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಬೀಳಿಸುವ ಆಸಕ್ತಿ ಅಷ್ಟೊಂದು ಇದ್ದರೆ, ಭಾರತ ವಿಶ್ವಗುರು ಎಂದು ಹೇಳುವಾಗ ಪಕ್ಕದ ಶ್ರೀಲಂಕಾ, ಅಪ್ಘಾನಿಸ್ತಾನ, ಪಾಕಿಸ್ತಾನ ಸರ್ಕಾರ ಬೀಳಸಲಿ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿತ್ತು. ಚುನಾವಣೆಯಲ್ಲಿ ಸೋತ ಬಳಿಕವೂ ಅವರನ್ನು ಎಂಎಲ್‌ಸಿ ಮಾಡಿತ್ತು. ಹೀಗಿದ್ದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಿಲ್ಲ ಎನ್ನುವುದು ಅರ್ಥಹೀನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಶೆಟ್ಟರ್‌ ಅವರ ಸಲುವಾಗಿ ಇಷ್ಟೆಲ್ಲ ಮಾಡಿದರೂ ಉಳಿಸಿಕೊಳ್ಳುವ ಪ್ರಯತ್ನ ಆಗಿಲ್ಲ ಎಂದು ಹೇಳಿದ್ದರೆ, ಈ ಮಾತನ್ನು ಹೇಳಿದವರನ್ನೇ ಕೇಳಬೇಕು ಎಂದು ಲಕ್ಷ್ಮಣ ಸವದಿ ಹೇಳಿಕೆಗೆ ತಿರುಗೇಟು ನೀಡಿದರು.

ಇನ್ನು ಆಪರೇಷನ್‌ ಕಮಲ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಲಾಡ್‌, ರಾಜ್ಯದಲ್ಲಿ ಕಾಂಗ್ರೆಸ್‌ನ ಶಾಸಕರ ಸಂಖ್ಯೆ 136, ಬಿಜೆಪಿ-ಜೆಡಿಎಸ್‌ ಕೂಡಿಸಿದರೂ 85 ಸಂಖ್ಯೆ ಆಗುತ್ತದೆ. ಆಪರೇಷನ್‌ ಕಮಲ ಮಾಡಲು 53 ಶಾಸಕರು ಬೇಕಾಗುತ್ತದೆ. ಇದೆಲ್ಲ ಆಗದ ಮಾತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಬೀಳಿಸುವ ಆಸಕ್ತಿ ಅಷ್ಟೊಂದು ಇದ್ದರೆ, ಭಾರತ ವಿಶ್ವಗುರು ಎಂದು ಹೇಳುವಾಗ ಪಕ್ಕದ ಶ್ರೀಲಂಕಾ, ಅಪ್ಘಾನಿಸ್ತಾನ, ಪಾಕಿಸ್ತಾನ ಸರ್ಕಾರ ಬೀಳಸಲಿ ಎಂದು ಹೇಳಿದರು.

ಇದರ ಬದಲು ಪ್ರಸ್ತುತ ವಿಚಾರಗಳ ಬಗ್ಗೆ ಬಿಜೆಪಿ ಅವರನ್ನು ಪ್ರಶ್ನಿಸುವ ಕೆಲಸ ಮಾಧ್ಯಮಗಳು ಮಾಡಬೇಕು. ಬಹಿರಂಗ ಚರ್ಚೆಗೆ ಕರೆಯಬೇಕು. ಬಿಜೆಪಿ ಆಡಳಿತಾವಧಿಯಲ್ಲಿ ಭಾರತದ ಸಾಲ ₹175 ಲಕ್ಷ ಕೋಟಿ ಆಗಿದೆ. 1947 ರಿಂದ 2014ರವರೆಗೆ ಭಾರತದ ಸಾಲ ₹55 ಕೋಟಿ ಇತ್ತು. ಇಂತಹ ಪ್ರಸ್ತುತ ವಿಚಾರಗಳ ಬಗ್ಗೆ ಏಕೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.