ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಿರವಿ ಇಟ್ಟಿರುವ ಚಿನ್ನವನ್ನು ರೈತರಿಗೆ ವಾಪಸ್ ನೀಡಬೇಕು ಹಾಗೂ ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಚೆಂಡು ಮಲ್ಲಿಗೆ ಸಂಸ್ಕರಣ ಘಟಕ ಬೇಡ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಿಂದ ಜಿಲ್ಲಾಡಳಿತ ಭವನದ ವರಗೆ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನದ ಆವರಣದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಚಿನ್ನದ ಅವ್ಯವಹಾರದಲ್ಲಿ ಒಂದು ವರ್ಷದಿಂದ ರೈತರ ಚಿನ್ನ ಕೊಡಿಸುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಇರುವ ಕಾನೂನು ಅಡೆತಡೆಗಳನ್ನು ಸರಿಪಡಿಸಿ ತಕ್ಷಣ ರೈತರಿಗೆ ಚಿನ್ನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಗುಂಡ್ಲುಪೇಟೆ ತಾಲೂಕು ಗುರುವಿನಪುರದಲ್ಲಿ ಚೆಂಡು ಮಲ್ಲಿಗೆ ಸಂಸ್ಕರಣ ಘಟಕ ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸ್ಥಳೀಯವಾಗಿ ಪರಿಸರ ಹಾಳಾಗುತ್ತದೆ ಅಂತರ್ಜಲ ಹಾಳಾಗಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಸ್ಥಳೀಯ ರೈತರ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟಾಗುತ್ತದೆ. ಆದ ಕಾರಣ ಕಾರ್ಖಾನೆ ಮತ್ತು ಉದ್ಯೋಗ ಸೃಷ್ಟಿಯಾವಕಾಶ ಕಾರ್ಖಾನೆ ಸರ್ಕಾರಕ್ಕೆ ತೆರಿಗೆ ಬೇಕಾಗಿದ್ದರೆ ಸರ್ಕಾರ ಅಭಿವೃದ್ಧಿಪಡಿಸಿರುವ ಕೆಐಡಿಪಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಈ ಚೆಂಡು ಸಂಸ್ಕಾರ ಘಟಕ ಮಾಡಲು ಅವಕಾಶ ಕಲ್ಪಿಸಲಿ ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇಡ ಯಾವುದೇ ಕಾರಣಕ್ಕೂ ಚೆಂಡು ಮಲ್ಲಿಗೆ ಸಂಸ್ಕರಣ ಘಟಕಕ್ಕೆ ಅವಕಾಶ ನೀಡುವುದಿಲ್ಲ. ರೈತರ ಚಿನ್ನ ಕೊಡಿಸುವಲ್ಲಿ ಹಂತ ಹಂತವಾಗಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ಶೇಖರ್ ದೇವ್ರು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಜೆನ್ನೂರ್ ಶಾಂತರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮಂಚಳ್ಳಿ ಮಣಿಕಂಠ, ಕೋಟೆಕೆರೆ ಮಹದೇವ ನಾಯಕ, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ರಾಜಶೇಖರ್, ಮಹದೇವಸ್ವಾಮಿ ಗುರುಮಲ್ಲಪ್ಪ ಮಲೆಯೂರು ಗ್ರಾಮ ಘಟಕದ ಅಧ್ಯಕ್ಷ ಬಸವರಾಜಪ್ಪ ಸತೀಶ್ ಇತರರು ಭಾಗವಹಿಸಿದ್ದರು.