ಸಾರಾಂಶ
ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲಾಂದ್ರೆ ನಾಚಿಕೆಯಾಗಬೇಕು..!
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಈ ಕುರಿತು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ರಕ್ತನಿಧಿ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಯಾದಗಿರಿ ಮತಕ್ಷೇತ್ರ ಕುಂದುಕೊರತೆಗಳ ಬಗ್ಗೆ ಸುಮಾರು 10-12 ನಿಮಿಷ ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದ ಶಾಸಕರು, ಯಾದಗಿರಿ ಮತಕ್ಷೇತ್ರದಲ್ಲಿನ ವಿವಿಧ ವಿಚಾರಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದರು.
ಬ್ಲಡ್ ಬ್ಯಾಂಕ್, ಎಂಆರ್‌ಐ:ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ರಕ್ತನಿಧಿ ಕೇಂದ್ರ (ಬ್ಲಡ್ ಬ್ಯಾಂಕ್) ಇಲ್ಲದಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಶಾಸಕ ತುನ್ನೂರು, ಇದು ನಾಚಿಕೆ ಬರಬೇಕು ಎಂದು ಕಿಡಿ ಕಾರಿದರು. ಎಂ.ಆರ್.ಐ. ಸ್ಕ್ಯಾನಿಂಗ್ ಇಲ್ಲ. ಇದನ್ನು ನೀಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿರುವ ಸಿಟಿ ಸ್ಕ್ಯಾನ್ ವ್ಯವಸ್ಥೆ ಬಡ ರೋಗಿಗಳಿಗೆ ಸಿಗುತ್ತಿಲ್ಲ. ಅನೇಕ ಕಾರಣಗಳನ್ನು ಹೇಳಿ ರೋಗಿಗಳನ್ನು ಖಾಸಗಿ ಕೇಂದ್ರಗಳತ್ತ ಕಳುಹಿಸಲಾಗುತ್ತಿದೆ ಎಂದು ದೂರಿದರು.ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಗರ್ಭಿಣಿಯರು ಹೆರಿಗೆಗೆಂದು ಹೋದರೆ ಅನೇಕ ವೈದ್ಯಕೀಯ ಕಾರಣಗಳ ಹೇಳಿ, ಅವರ ಮನದಲ್ಲಿ ಭೀತಿ ಉಂಟಾಗುವಂತೆ ಮಾಡಲಾಗುತ್ತಿದೆ. ಶಿಶು ಉಳಿಯುವುದಿಲ್ಲ, ಬೇರೆಡೆ ಹೋಗಿ ಎಂದು ಬೇರೆಡೆ ಕಳುಹಿಸಲಾಗುತ್ತದೆ. ಹೀಗಾಗಿ, ಬಡ ರೋಗಿಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಾರೆ. ಅನೇಕ ವರ್ಷಗಳಿಂದ ಇಲ್ಲಿಯೇ ಬೇರು ಬಿಟ್ಟಿರುವ ವೈದ್ಯರು ಸಿಬ್ಬಂದಿ ಬದಲಾಯಿಸಲು ಆರೋಗ್ಯ ಸಚಿವರು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.
ಕನ್ನಡಪ್ರಭ ವರದಿ ಪ್ರಸ್ತಾಪ:ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕ್ ಕೊರತೆ ಬಗ್ಗೆ ಕನ್ನಡಪ್ರಭ ಡಿ.13ರಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಜಿಲ್ಲಾಡಳಿತ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ, ಬ್ಲಡ್ ಬ್ಯಾಂಕ್ ಕುರಿತು ಶಾಸಕ ತುನ್ನೂರು ಬುಧವಾರ ಸದನದಲ್ಲಿ ತೀವ್ರ ಬೇಸರವನ್ನೂ ವ್ಯಕ್ತಪಡಿಸಿ, ರಕ್ತನಿಧಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿದ್ದಾರೆ.
-------13ವೈಡಿಆರ್11
ಬೆಳಗಾವಿ ಅಧಿವೇಶನದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿದರು.-------
13ವೈಡಿಆರ್12ಯಾದಗಿರಿಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲದಿರುವ ಬಗ್ಗೆ ಡಿ.13 ರಂದು ಕನ್ನಡಪ್ರಭ ವರದಿ.