ಯಾವ ಮಗುವೂ ಶಾಲೆಯಿಂದ ಹೊರಗುಳಿಯಬಾರದು-ಡಿಸಿ ಜಿಲ್ಲಾಧಿಕಾರಿ

| Published : Sep 01 2024, 01:48 AM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದೇವಗಿರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾದ ಪೋಷಣ ಮಾಸಾಚರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ದೇವಗಿರಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೇರಲ ಸಸಿ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದೇವಗಿರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾದ ಪೋಷಣ ಮಾಸಾಚರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ದೇವಗಿರಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೇರಲ ಸಸಿ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.ನಂತರ ಅಂಗನವಾಡಿ ಕೇಂದ್ರದ ಅಡುಗೆ ಕೊಣೆ, ಆಹಾರ ದಾಸ್ತಾನು ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಬೆಲ್ಲ ಸೇರಿದಂತೆ ವಿವಿಧ ಆಹಾರ ಸಾಮಗ್ರಿ ಗುಣಮಟ್ಟದ ಕುರಿತು ಮಕ್ಕಳ ಪಾಲಕರಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿಗಳು ಮಿಲೆಟ್ ಲಾಡು ತಿನ್ನುವ ಮೂಲಕ ರುಚಿ ಪರಿಶೀಲಿಸಿದರು. ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಗ್ರಾಮದ ಎಲ್ಲ ಮಕ್ಕಳು ಶಾಲೆಗಳಿಗೆ ಹೋಗುವಂತೆ ನೋಡಿಕೊಳ್ಳಬೇಕು ಹಾಗೂ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂದು ತಿಳಿಸಿದರು.ಅಂಗನವಾಡಿ ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಪ್ರತಿ ಮಗುವಿನ ಮಾಹಿತಿ ಅಪ್‌ಡೆಟ್ ಇದೆಯಾ ಎಂದು ಪ್ರಶ್ನಿಸಿದರು. ಎಲ್ಲ ಮಕ್ಕಳ ಆಧಾರ್‌ಕಾರ್ಡ್ ಮಾಡಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದ ಅವರು, ಜಲಜೀವನ ಮಿಷನ್ ಯೋಜನೆಯಡಿ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಿಗೆ ನೀರಿನ ಸೌಲಭ್ಯ ನೀಡಲು ಆದ್ಯತೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮೆಚ್ಚುಗೆ: ಅಂಗನವಾಡಿ ಕೇಂದ್ರದಲ್ಲಿ ಅಳವಡಿಸಲಾದ ಮಕ್ಕಳ ಆಟಿಕೆ, ಗೋಡೆ ಬರಹ, ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರ ತುಂಬಾ ಮುಖ್ಯವಾಗಿದ್ದು, ಎಲ್ಲರ ಸಹಕಾರ ಹೀಗೆ ಇರಲಿ ಎಂದರು.

ಅಂಗನವಾಡಿ ಕೇಂದ್ರದ ಆವರಣದಲ್ಲಿರುವ ಸಿ.ಎಸ್.ಸಿ. ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ನೀಡುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಗೃಹಲಕ್ಷ್ಮೀ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆಯಾ ಎಂದು ಮಹಿಳೆಯರನ್ನು ವಿಚಾರಿಸಿದಾಗ, ಹಣ ಜಮೆಯಾಗುತ್ತಿದೆ ಎಂದರು.ಪೋಷಣ ಮಾಸಾಚರಣೆ ಅಂಗವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸೆ. ೩೦ರವರೆಗೆ ಒಂದು ತಿಂಗಳ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರುಹಟ್ಟಿ ಮಾಹಿತಿ ನೀಡಿದರು.ಡಿಜಿಟಲ್ ವ್ಯವಸ್ಥೆ: ಎಂಟು ಅಂಗನವಾಡಿ ಕೇಂದ್ರಗಳನ್ನು ಡಿಜಿಟಲ್ ಮಾಡಲಾಗಿದೆ ಹಾಗೂ ಡಿಜಿಟಲ್ ಗ್ರಂಥಾಲಯ ಸಹ ಮಾಡಲಾಗಿದೆ. ಗ್ರಂಥಾಲಯದಲ್ಲಿ ಎಂಟು ಕಂಪ್ಯೂಟರ್‌ಗಳಿದ್ದು, ೩೫ ಆಸನದ ವ್ಯವಸ್ಥೆ ಇದ್ದು, ಮಕ್ಕಳಿಗೆ ಹಾಗೂ ವಯಸ್ಕರರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿತಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಪಾರಿಗಂಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆದಲರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎ.ತಹಶೀಲ್ದಾರ, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ತಾಯಂದಿರು ಇತರರು ಉಪಸ್ಥಿತರಿದ್ದರು.