ಕಮತಗಿ ಪಪಂ ಅಧ್ಯಕ್ಷರ ವಿರುದ್ಧ ಇಂದು ಅವಿಶ್ವಾಸ ಸಭೆ

| Published : Jul 18 2025, 12:45 AM IST

ಸಾರಾಂಶ

ಕಮತಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಎಸ್. ಜಮಖಂಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷದ ಕೆಲ ಸದಸ್ಯರು, ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿ ಅವಿಶ್ವಾಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕನ್ನಡಪ್ರಭ ವಾರ್ತೆ ಕಮತಗಿ

ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಎಸ್. ಜಮಖಂಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷದ ಕೆಲ ಸದಸ್ಯರು, ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿ ಅವಿಶ್ವಾಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಪಟ್ಟಣ ಪಂಚಾಯತಿಯ ಒಟ್ಟು 16 ಸದಸ್ಯರಲ್ಲಿ ಕಾಂಗ್ರೆಸ್ 11, ಬಿಜೆಪಿ 4, ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದಿದ್ದರಿಂದ ಕಳೆದ ವರ್ಷ ಅ.21ರಂದು ರಮೇಶ ಎಸ್. ಜಮಖಂಡಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಆದರೆ 12 ತಿಂಗಳೊಳಗೆ ಅಧ್ಯಕ್ಷರ ವಿರುದ್ಧ ಸ್ವಪಕ್ಷದ (ಕಾಂಗ್ರೆಸ್) 9, ಬಿಜೆಪಿಯ 3, ಓರ್ವ ಪಕ್ಷೇತರ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿದ್ದಾರೆ. ಜು.18ರಂದು ವಿಶೇಷ ಸಾಮಾನ್ಯ ಸಭೆ ಕರೆದಿದ್ದು, ಅವಿಶ್ವಾಸ ಗೊತ್ತುವಳಿಗೆ ಗೆಲುವಾಗುವುದೋ ಇಲ್ಲವೆ ರಮೇಶ ಜಮಖಂಡಿ ಮುಂದುವರಿಯುವರೋ ಕಾದು ನೋಡಬೇಕಿದೆ.

ಅವಿಶ್ವಾಸ ಗೊತ್ತುವಳಿ ಮಂಡಿಸಲು ಕನಿಷ್ಠ 1/3 ಸದಸ್ಯ(12ಕ್ಕೂ)ರ ಸಹಿ ಬೇಕಾಗಿದ್ದರಿಂದ 3 ಸದಸ್ಯರ ಬೆಂಬಲ ಪಡೆದಿದ್ದರೆ,ಇನ್ನೋರ್ವ ಬಿಜೆಪಿ ಸದಸ್ಯ ಅಂತರ ಕಾಯ್ದುಕೊಂಡಿದ್ದಾರೆ.ಅಧಿಕಾರದ ಆಸೆಗಾಗಿ ಕೈ,ಕಮಲ ಪಕ್ಷಗಳ ನಡುವೆ ಹೊಂದಾಣಿಕೆ ರಾಜಕಾರಣ ಆಗಲು ಮುನ್ನುಡಿ ಬರೆದಿದ್ದು, ಕಮತಗಿ ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಿಕೆಪಿಎಸ್ ಸದಸ್ಯನಿಗೆ ಉಪಾಧ್ಯಕ್ಷ ಸ್ಥಾನ ನೀಡಿದಂತೆ ಪಟ್ಟಣ ಪಂಚಾಯತಿಯಲ್ಲೂ ಬಿಜೆಪಿ ಸದಸ್ಯನಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಭರವಸೆ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿವೆ. ರಾಜ್ಯ, ರಾಷ್ಟಮಟ್ಟದಲ್ಲಿ ಬದ್ಧ ವೈರಿಗಳಾಗಿರುವ ಕೈ, ಕಮಲ ಪಕ್ಷಗಳು ಕಮತಗಿ ಪಟ್ಟಣ ಪಂಚಾಯತಿಯಲ್ಲಿ ಸೇರಿಕೊಂಡು ಅಧಿಕಾರ ಹಿಡಿಯಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿದೆ.