ಸಾರಾಂಶ
ಏಕಪಕ್ಷಿಯ ನಿರ್ಣಯ ಕೈಗೊಳ್ಳುವುದರ ಜತೆಗೆ ಸದಸ್ಯರ ಅಭಿಪ್ರಾಯ ಸಲಹೆಗಳಿಗೆ ಅವಕಾಶ ನೀಡದೇ ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ
ಮುಂಡಗೋಡ:
ತಾಲೂಕಿನ ಸಾಲಗಾಂವ ಗಾಪಂ ಅಧ್ಯಕ್ಷ,ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮಂಗಳವಾರ ಕರೆಯಲಾಗಿದ್ದ ವಿಶೇಷ ಸಭೆಗೆ ಸರ್ವ ಸದಸ್ಯರು ಗೈರು ಹಾಜರಾಗಿದ್ದರಿಂದ ಅವಿಶ್ವಾಸ ನಿರ್ಣಯ ಮಂಡನೆ ವಿಫಲವಾಯಿತು.ಗ್ರಾಪಂ ಅಧ್ಯಕ್ಷ ಗಣಪತಿ ದೇವೆಂದ್ರಪ್ಪ ಬಾಳಮ್ಮನವರ ಹಾಗೂ ಉಪಾಧ್ಯಕ್ಷೆ ರೇಖಾ ಹನ್ಮಂತ ಹರಿಜನ ಯಾವುದೇ ಅಭಿವೃದ್ಧಿ ಕೆಲಸ ಮಾಡುವಾಗ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ ಮಹಿಳಾ ಸದಸ್ಯರಿಗೆ ಸಂಪೂರ್ಣವಾದ ವಾಸ್ತವಂಶದ ಮಾಹಿತಿ ನೀಡದೇ ಎಲ್ಲವನ್ನು ತಾವೇ ನಿರ್ಣಯ ಕೈಗೊಳ್ಳುತ್ತಾರೆ. ತಮ್ಮ ಅಧಿಕಾರ ನಿರ್ವಹಣೆಯಲ್ಲಿ ಏಕಪಕ್ಷಿಯ ನಿರ್ಣಯ ಕೈಗೊಳ್ಳುವುದರ ಜತೆಗೆ ಸದಸ್ಯರ ಅಭಿಪ್ರಾಯ ಸಲಹೆಗಳಿಗೆ ಅವಕಾಶ ನೀಡದೇ ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಮನ ಬಂದಂತೆ ಆಡಳಿತ ನಡೆಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಚುನಾಯಿತ ಸದಸ್ಯರ ೨/೩ರಷ್ಟು ಸಂಖ್ಯೆಯ ಸದಸ್ಯರು ಅವಿಶ್ವಾಸ ಮಂಡಿಸಲು ತಿರ್ಮಾನಿಸಿದ್ದು. ಅವಿಶ್ವಾಸವಿರುವ ಸದಸ್ಯರ ಸಹಿಯೊಂದಿಗೆ ಸಭೆ ಕರೆಯುವಂತೆ ಆಗ್ರಹಿಸಿ ಸಾಲಗಾಂವ ಗ್ರಾಪಂ ಸುಮಾರು ೧೦ ಜನ ಸದಸ್ಯರು ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ಅಧ್ಯಕ್ಷತೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಶೇಷ ಸಭೆ ಕರೆಯಲಾಗಿತ್ತು. ನಿಗದಿತ ಸಮಯದೊಳಗೆ ಸದಸ್ಯರು ಹಾಜರಾಗದ ಕಾರಣ ಸಹಜವಾಗಿ ಅವಿಶ್ವಾಸ ನಿರ್ಣಯ ಮಂಡನೆ ವಿಫಲವಾಯಿತು.