ಸಾರಾಂಶ
ಇದುವರೆಗೆ ಪಕ್ಷದಿಂದ ವಾಹನಗಳ ಬಾಡಿಗೆ ಹಣ ಬಂದಿಲ್ಲ.ಆದರೆ ಕೆಲವರು ಬಾಡಿಗೆ ವಾಹನ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ
ಮುಂಡಗೋಡ: ತಾಲೂಕು ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ.ಯಾವುದೇ ಅವ್ಯವಹಾರ ಕೂಡ ನಡೆದಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಕೆಲವೇ ಕೆಲವರು ಆಧಾರ ರಹಿತ ಇಲ್ಲ ಸಲ್ಲದ ಆರೋಪ ಮಾಡುತ್ತ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದು,ಇದಕ್ಕೆ ಯಾರು ಕಿವಿಗೊಡಬಾರದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ ಹೇಳಿದರು.
ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕೆಲವಷ್ಟು ಆರೋಪ ಮಾಡಿದ ವಿಷಯಕ್ಕೆ ಸಂಬಂಧಿದಂತೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ಅಸಮಾಧಾನ ಹಾಗೂ ಗೊಂದಲವಿದ್ದಿದ್ದರೆ ಕಳೆದ ವಿದಾನಸಭಾ ಚುನಾವಣೆಯಲ್ಲಿ ಮುಂಡಗೋಡ ತಾಲೂಕಿನಿಂದ ಕಾಂಗ್ರೆಸ್ ಪಕ್ಷಕ್ಕೆ ೬ ಸಾವಿರ ಮತಗಳ ಲೀಡ್ ಬರುತ್ತಿರಲಿಲ್ಲ. ಇತ್ತೀಚೆಗೆ ಮಂಗಳೂರನಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ವಿ.ಎಸ್.ಪಾಟೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ನೇತೃತ್ವದಲ್ಲಿ ಮುಂಡಗೋಡ ತಾಲೂಕಿನಿಂದ ಸುಮಾರು ೧೦ಕ್ಕೂ ಅಧಿಕ ವಾಹನಗಳು ಹೋಗಿದ್ದವು. ಇದುವರೆಗೆ ಪಕ್ಷದಿಂದ ವಾಹನಗಳ ಬಾಡಿಗೆ ಹಣ ಬಂದಿಲ್ಲ.ಆದರೆ ಕೆಲವರು ಬಾಡಿಗೆ ವಾಹನ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.ಈ ಹಿಂದಿನ ಬ್ಲಾಕ್ ಅಧ್ಯಕ್ಷರ ವಿರುದ್ಧವೂ ಕೂಡ ಕೆಲವರಿಂದ ಇದೇ ರೀತಿ ಗೊಂದಲ ಸೃಷ್ಟಿ ಮಾಡಲಾಗುತ್ತಿತ್ತು.ಅದೇ ಪ್ರವೃತ್ತಿ ಈಗಲೂ ಮುಂದುವರೆಸಿದ್ದು, ಪಕ್ಷದ ಹೆಸರನ್ನು ಹಾಳು ಮಾಡುವ ಕೆಲಸ ಕೆಲವರಿಂದ ನಡೆಯುತ್ತಿದೆ.ಇದಕ್ಕೆ ಕಡಿವಾಣ ಹಾಕುವ ಮೂಲಕ ಎಲ್ಲರೂ ಪಕ್ಷದ ಸಂಘಟನೆಯ ಬಗ್ಗೆ ಒತ್ತು ನೀಡಬೇಕು.ಅಲ್ಲದೇ ಗೊಂದಲ ಸೃಷ್ಟಿಸಿ ಪಕ್ಷದ ಹೆಸರು ಹಾಳು ಮಾಡುವರ ಹಿಂದೆ ಯಾರ ಕೈವಾಡವಿದೆ ಎಂಬುವುದರ ಬಗ್ಗೆ ತಿಳಿದುಕೊಂಡು ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹೈಕಮಾಂಡಗೆ ಮನವಿ ಮಾಡಲಾಗುವುದು ಎಂದು ದುಂಡಸಿ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ರಜಾಖಾನ ಪಠಾಣ ಮುಂತಾದವರು ಉಪಸ್ಥಿತರಿದ್ದರು.