ಮೂಡದ ಒಮ್ಮತ, ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

| Published : Sep 20 2025, 01:01 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದಲ್ಲಿ ಅ. ೭ರಂದು ನಡೆಯುವ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಸ್ಥಳ ಕುರಿತು ಒಮ್ಮತದ ನಿರ್ಣಯ ಮೂಡದೇ ಪೂರ್ವಭಾವಿ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.

ಗಜೇಂದ್ರಗಡ: ಪಟ್ಟಣದಲ್ಲಿ ಅ. ೭ರಂದು ನಡೆಯುವ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಸ್ಥಳ ಕುರಿತು ಒಮ್ಮತದ ನಿರ್ಣಯ ಮೂಡದೇ ಪೂರ್ವಭಾವಿ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಆರಂಭವಾದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗದಗ ರಸ್ತೆಯ ಬಾಬು ಜಗಜೀವನರಾಂ ಭವನದಲ್ಲಿ ಆಚರಿಸುವ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸಿದರು. ಆದರೆ ಸಮಾಜದ ಮುಖಂಡರು ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಆಗಮಿಸುವ ಸಮಾಜ ಬಾಂಧವರಿಗೆ ಕಾರ್ಯಕ್ರಮಕ್ಕೆ ಬರಲು, ಹೋಗಲು ತೊಂದರೆ ಆಗುತ್ತಿದೆ. ಹೀಗಾಗಿ ಸಮಾಜಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಆಚರಿಸಬೇಕು ಎಂದು ಒತ್ತಾಯಿಸಿದರು. ಹೀಗಾಗಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಜಿ.ಎಸ್. ನಾಡಗೌಡರ ಅವರು ಕಾರ್ಯಕ್ರಮ ವೇದಿಕೆ ಕುರಿತು ಚರ್ಚಿಸಲು ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ಗದಗನಲ್ಲಿ ಚುನಾವಣೆ ಕರ್ತವ್ಯದ ಸಭೆಯಲ್ಲಿ ಇರುವುದಾಗಿ ತಿಳಿಸಿದರು. ಬಳಿಕ ನಡೆದ ಚರ್ಚೆಯಲ್ಲಿ ಮುಖಂಡರು ಕಾರ್ಯಕ್ರಮದ ವೇದಿಕೆ ನಿಗದಿಯಾಗದಿದ್ದರೆ ಮತ್ತೊಂದು ದಿನ ಸಭೆ ನಡೆಸಿ ಎಂದು ಆಗ್ರಹಿಸಿದರು. ಹೀಗಾಗಿ ಅಧಿಕಾರಿಗಳು ಸನ್ಮಾನ, ಊಟ ಸೇರಿ ಇತರ ಕಾರ್ಯಕ್ರಮಗಳ ಒಪ್ಪಿಗೆಯನ್ನು ಪಡೆದರು. ಉಪನ್ಯಾಸ, ವೇದಿಕೆ ಹಾಗೂ ಮೆರವಣಿಗೆ ಮಾರ್ಗ ಸೇರಿ ಇತರ ಕಾರ್ಯಕ್ರಮಗಳನ್ನು ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಿಸಲು ಸಭೆಯಲ್ಲಿ ನಿರ್ಧರಿಸಿದ್ದರಿಂದ ಪೂರ್ವಭಾವಿ ಸಭೆಯನ್ನು ಮುಂದೂಡಲಾಯಿತು. "ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರು. ೪೩ ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ ಅಂದಾಜು ರು. ೫ ಲಕ್ಷ ೩೯ ಸಾವಿರಕ್ಕೆ ಜಾಗ ಖರೀದಿ ಮಾಡಲಾಗಿದೆ. ಇನ್ನುಳಿದ ಅನುದಾನದ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಹಿಂದಿನ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಕೇಳಿದಾಗ ವಾಲ್ಮೀಕಿ ಅವರ ಜಯಂತಿ ಆಚರಣೆ ವೇಳೆ ತಿಳಿಸುವುದಾಗಿ ಹೇಳಿದ್ದರು. ಆದರೆ ಜಯಂತಿ ಮುಗಿದು ಮತ್ತೊಮ್ಮೆ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿಲ್ಲ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಹರ್ಷಿ ವಾಲ್ಮೀಕಿ ನಾಯಕ ಟ್ರಸ್ಟ್ ಕಮಿಟಿ ತಾಲೂಕಾಧ್ಯಕ್ಷ ಭೀಮಣ್ಣ ತಳವಾರ, ಹನಮಂತಪ್ಪ ಹಟ್ಟಿಮನಿ, ಎಂ.ಎಚ್. ರಂಗಣ್ಣವರ, ಪುರಸಭೆ ಸದಸ್ಯ ಶರಣಪ್ಪ ಉಪ್ಪಿನಬೆಟಗೇರಿ, ಬಾಲಚಂದ್ರ ವಾಲ್ಮೀಕಿ, ಮುತ್ತಪ್ಪ ಲ್ಯಾವಕ್ಕಿ, ರವಿ ಬೆಲ್ಲಪ್ಪನವರ, ಲಕ್ಷ್ಮಣ ತಳವಾರ, ನಾಗರಾಜ ತಳವಾರ, ಶ್ರೀಕಾಂತ ಹರಪನಹಳ್ಳಿ, ಅಂದಪ್ಪ ವಾಲ್ಮೀಕಿ, ಶರಣು ಪೂಜಾರ, ರವಿ ಗಡೇದವರ, ಅಂದಪ್ಪ ರಾಠೋಡ, ಶರಣಪ್ಪ ಹುಡೇದ, ದುರಗೇಶ ಗಾಂಧಾಳ, ಸೇರಿ ಸಮಾಜ ಕಲ್ಯಾಣ ಇಲಾಖೆ, ಹೆಸ್ಕಾಂ, ಅಬಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.