ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟನೆ

| Published : Jan 20 2024, 02:00 AM IST

ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಇದನ್ನೇ ಮುಂದಿಟ್ಟು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೋರಾಟ ಮಾಡಲಾಗುವುದು. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಳ ಮೀಸಲಾತಿ ಪ್ರಸ್ತಾವನೆ ಹರಿದು ಹಾಕಿದ್ದೇ ಖರ್ಗೆ । ಕುಟುಂಬ ಸಮೇತ ಅಯೋಧ್ಯೆಗೆ ಹೋಗುವೆ ಕನ್ನಡಪ್ರಭ ವಾರ್ತೆ ಹಾಸನ

ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಇದನ್ನೇ ಮುಂದಿಟ್ಟು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೋರಾಟ ಮಾಡಲಾಗುವುದು. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ನಗರದ ಸಂಸದರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದ್ದು, ಎಸ್‌.ಎಂ. ಕೃಷ್ಣ, ಡಿ.ಕೆ. ಶಿವಕುಮಾ‌ರ್ ಸೇರಿ ಎಲ್ಲರೂ ಭಾಗಿಯಾಗುವರು ಎಂದ ಹೇಳಿದರು.

‘ಒಕ್ಕಲಿಗ ಸಮುದಾಯದ ಕೋಟಾದಲ್ಲಿನ ಮೀಸಲಾತಿ ಕಡಿತ ಮಾಡಿ ಮುಸ್ಲಿಮರಿಗೆ ಹಂಚಿದ್ದೆ ನಾನು. ಇದೀಗ ಒಳ ಮೀಸಲಾತಿ ಕೇಳುತ್ತಿರುವ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೇ ನಾನು ಸಿಎಂ ಆಗಿದ್ದಾಗ ಸಲ್ಲಿಸಿದ ಒಳ ಮೀಸಲಾತಿ ಪ್ರಸ್ತಾವನೆಯನ್ನು ಹರಿದು ಹಾಕಿದ್ದರು’ ಎಂದು ದೇವೇಗೌಡ ಹೇಳಿದರು.

‘ಒಳ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಅಂದು ಒಕ್ಕಲಿಗರ ಮೀಸಲಾತಿ ಕೋಟಾ ಕಡಿತಗೊಳಿಸಿ ಮುಸ್ಲಿಮರಿಗೆ ಹಂಚಿದ್ದೆ ನಾನು. ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಕೊಟ್ಟ ಮೀಸಲಾತಿ ಭರ್ತಿ ಮಾಡಲು ಆಗದಿದ್ದಾಗ ಉದ್ಯೋಗದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇ. ೧೫ ಎಸ್‌ಸಿಗಳಿಗೆ, ಶೇ. ೩ ರಷ್ಟು ಎಸ್ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಎಸ್‌ಸಿಗಳಿಗೆ ಶೇ. ೧೫ ರಿಂದ ೧೮ಕ್ಕೆ, ಎಸ್‌ಟಿಗಳಿಗೆ ಶೇ. ೩ ರಿಂದ ೫ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮಾಡಿದ್ದೇನೆ’ ಎಂದು ಮೀಸಲಾತಿ ಬಗ್ಗೆ ತಮ್ಮ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಇದೇ ವೇಳೆ ಸ್ಮರಿಸಿದರು.

‘ಅಂದು ಶೇ. ೨೩ ಎಂದು ತೀರ್ಮಾನ ಮಾಡಿದ್ದು ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಇಷ್ಟು ವರ್ಷ ನಾವು ಮಾಡಿರೊ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿಯ ಫಲ ಅನುಭವಿಸಿವೆ’ ಎಂದು ಹೇಳಿದರು.

ಪ್ರಸ್ತಾವನೆ ಹರಿದಿದ್ದು ಖರ್ಗೆ:

‘ನಮ್ಮ ಅವಧಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ದರು. ಆಗ ಖರ್ಗೆ ಅವರು ಆಗ ವಿಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಸೀಟ್‌ನಿಂದ ನೆಗೆದು ಬಂದು ಆ ನಿರ್ಣಯ ಪ್ರತಿಯನ್ನು ಹರಿದು ಅವರ ಮುಖಕ್ಕೆ ಎಸೆದರು. ಆದರೆ ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಣ್ಣ ಮಾತನಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಗೌಡರು, ‘ಮೀಸಲಾತಿ ಬಗ್ಗೆ ಏನಾಗಿದೆ ಎನ್ನುವ ಬಗ್ಗೆ ಚರ್ಚೆ ಆಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ನಾನು ಕೊಂಡೊಯ್ಯುತ್ತೇನೆ. ನನಗೆ ನಾಲ್ಕು ಸೀಟ್ ಕೊಡ್ತಾರೊ, ಮೂರು ಕೊಡ್ತಾರೊ ಗೊತ್ತಿಲ್ಲ’ ಎಂದರು.

‘ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು? ೧೩ ತಿಂಗಳಿಗೆ ನನ್ನ ಪ್ರಧಾನ ಮಂತ್ರಿ ಸ್ಥಾನ ತೆಗೆದಿದ್ದು ಯಾರು? ನನ್ನ ರಾಜಕೀಯ ಜೀವನದಲ್ಲಿ ೬೦ ವರ್ಷ ದುಡಿದಿದ್ದೇನೆ. ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಲಾಭ ಆಗಿದೆ? ಇದರ ಲಾಭವನ್ನು ಯಾರು ಪಡೆದಿದ್ದಾರೆ? ಚರ್ಚೆ ಆಗಬೇಕು ಎಂಬುದು ನನ್ನ ಒತ್ತಾಯ’ ಎಂದರು.

ಅಯೋಧ್ಯೆಗೆ ಕುಟುಂಬ ಸಮೇತ ಹೋಗುವೆ:

‘ಜನವರಿ ೨೨ಕ್ಕೆ ಆಯೋಧ್ಯೆಗೆ ಬರುವಂತೆ ಕರೆ ಬಂದಿದ್ದು, ನಾನು ,ಪತ್ನಿ ಸೇರಿದಂತೆ ಕುಮಾರಸ್ವಾಮಿ ,ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಕುಟುಂಬ ಸಮೇತವಾಗಿ ಜ.೨೨ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ. ಅದರಲ್ಲೆ ಹೋಗುತ್ತೇವೆ. ಅಯೋದ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ’ ಎಂದು ದೇವೇಗೌಡ ತಿಳಿಸಿದರು.

ಅರಸೀಕೆರೆ ಏನು ಅಂತ ಗೊತ್ತಿದೆ

‘ನಾನು ಎಷ್ಟು ಸಾರಿ ಅರಸೀಕೆರೆಗೆ ಬಂದಿರಬಹುದು, ಎಷ್ಟು ಜನ ಎಂಎಲ್ಎ ಮಾಡಿರಬಹುದು, ನನಗೆ ಅರಸೀಕೆರೆ ಏನು ಅಂತ ಗೊತ್ತಿದೆ’ ಎಂದು ಎಚ್. ಡಿ.ದೇವೇಗೌಡ ಹೇಳಿದರು.

ಜಿಲ್ಲೆಯ ಅರಸೀಕೆರೆಯ ಪರಾಜಿತ ಅಭ್ಯರ್ಥಿ ಎನ್‌.ಆರ್. ಸಂತೋಷ್ ಮನೆಯ ಬಳಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು ತಮ್ಮ ರಾಜಕೀಯ ಜೀವನದ ಮೆಲುಕು ಹಾಕಿದರು.

‘ನಾನು ಯಾವುದಾದರೂ ಸಮಾಜಕ್ಕೆ,ಲಿಂಗಾಯತ ಸಮುದಾಯ ಸೇರಿದಂತೆ, ಅನ್ಯಾಯ ಮಾಡಿದ್ದೇನೆಯೇ ಹೇಳಿ. ಅರಸೀಕೆರೆಗೆ ಕುಡಿಯುವ ನೀರಿಗೆ 24 ಬೋರ್ವೆಲ್ ಹಾಕಿಸಿದೆ. ಆದರೆ ಕುಡಿಯಲು ನೀರು ಯೋಗ್ಯವಿಲ್ಲ ಎಂದರು, ಹೇಮಾವತಿ ನದಿಯಿಂದ ನೇರವಾಗಿ ನೀರು ತರಲಾಯಿತು. ಯಾವುದೇ ಒಬ್ಬ ವ್ಯಕ್ತಿಯ ಹೆಸರು ಹೇಳಿ ಮತ ಕೇಳಲು ಬಂದಿಲ್ಲ ಅವರು ದೊಡ್ಡವರಿರಬಹುದು. ಅವರ ಬಗ್ಗೆ ಮಾತನಾಡುವುದಿಲ್ಲ’ ಎಂದು ಪರೋಕ್ಷವಾಗಿ ಶಿವಲಿಂಗೇಗೌಡರ ವಿರುದ್ಧ ದೇವೇಗೌಡರು ಗುಡುಗಿದರು .

ಸಂತೋಷ ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸ್ವಲ್ಪಮಟ್ಟಿಗೆ ಮನಸ್ಸಿನಲ್ಲಿ ಸಂಶಯವಿತ್ತು, ಅಶೋಕ್ ಗ್ರಹಗಳ ಬಗ್ಗೆ ಕೇಳಿದೆ ಸ್ವಲ್ಪಮಟ್ಟಿಗೆ ತೊಂದರೆ ಇತ್ತು. ಆದ್ದರಿಂದ ಸಂತೋಷ ಅವರನ್ನು ನಿಲ್ಲಿಸಲಾಯಿತು ಎಂದು ಹೇಳುತ್ತಿದ್ದೇನೆ ಎಂದರು.

ಪ್ರಧಾನಿ ಮೋದಿ ಗ್ರೇಟ್

‘60 ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಜೊತೆ ಹೋರಾಟ ಮಾಡಿದೆ. ನನ್ನನ್ನು ತುಳಿದರು. ಆದರೆ ಮೋದಿ ಅವರನ್ನು ಭೇಟಿ ಮಾಡಲು ಹೋದಾಗ ಪಕ್ಕದಲ್ಲಿ ಕುಮಾರಸ್ವಾಮಿ ,ರೇವಣ್ಣ ಅವರು ಇದ್ದರೂ ಸಹ ನನ್ನ ಕೈಹಿಡಿದು ಕೂರಿಸಿ ನೀವು ದೇಶಕ್ಕೆ ಸೇವೆ ಮಾಡಿದ್ದೀರಿ ಎಂದರು. ಹೀ ಈಸ್‌ ಗ್ರೇಟ್ ಮ್ಯಾನ್’ ಎಂದು ಹೊಗಳಿದರು. ‌ಹಾಸನದಲ್ಲಿ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು.