ಪಟ್ಟಾ ಭೂಮಿಯಲ್ಲಿ ಕಲ್ಲುಗಣಿಗಾರಿಕೆಗೆ ಭೂ ಪರಿವರ್ತನೆ ಬೇಡ

| Published : Mar 29 2024, 12:48 AM IST

ಸಾರಾಂಶ

ಪಟ್ಟಾ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡುವವರಿಗೆ ಭೂ ಪರಿವರ್ತನೆ ಮಾಡಿಸಬೇಕೆಂದ ನಿಯಮ ತೆಗೆಯಬೇಕೆಂದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ಮಾಜಿದ್ ಆಗ್ರಹಿಸಿದರು.

ಚಿತ್ರದುರ್ಗ: ಪಟ್ಟಾ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡುವವರಿಗೆ ಭೂ ಪರಿವರ್ತನೆ ಮಾಡಿಸಬೇಕೆಂದ ನಿಯಮ ತೆಗೆಯಬೇಕೆಂದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ಮಾಜಿದ್ ಆಗ್ರಹಿಸಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಅಸೋಸಿಯೇಷನ್ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ಸ್ಟೋನ್ ಕ್ರಷರ್‌ನಿಂದ ವಿದ್ಯುಚ್ಚಕ್ತಿ ಬಿಲ್ಲು ಪಡೆಯುವುದ ತಕ್ಷಣ ನಿಲ್ಲಿಸಬೇಕು.

ಮೈನರ್ ಮಿನರಲ್ ಕಲ್ಲುಗಣಿಗೆ ವಿಧಿಸಿದ ಜಿಯೋ ಫೆನ್ಸಿಂಗ್ ಪದ್ಧತಿಯನ್ನು ಸಂಪೂರ್ಣ ತೆಗೆದು ಹಾಕಬೇಕು.

ಕಲ್ಲುಗಣಿ ಮತ್ತು ಸ್ಟೋನ್ ಕ್ರಷರ್‌ಗೆ ಸರಕು ಸರಬರಾಜು ಮಾಡುವಂತಹ ಲಾರಿಗಳಿಗೆ ಅಳವಡಿಸಲು ಸೂಚಿಸಿದ ಜಿಪಿಎಸ್ ಪದ್ಧತಿಯನ್ನು ರದ್ದುಪಡಿಸಬೇಕು ಎಂದರು.

ಡ್ರೋಣ್ ಸರ್ವೆಗೆ ಕಂದಾಯ ಇಲಾಖೆ ಒಪ್ಪದ ಕಾರಣ ತೆಗೆಯಬೇಕು. ಆ್ಯಂಡ್‌ ಯೂಸರ್ ಕಡೆಯಿಂದ ರಾಜಧನ ಪಡೆದುಕೊಳ್ಳಬೇಕು. ಕಲ್ಲುಗಣಿಗೆ ಜಿಲ್ಲಾ ಕೇಂದ್ರಗಳಲ್ಲಿ ಡಿಇಐಎಎ ಕಮಿಟಿಯಲ್ಲಿ ಎಫ್‌ಸಿ ಪಡೆದವರು ರಾಜ್ಯ ಕಮಿಟಿ ಎಸ್ಇಐಎಎಯಲ್ಲಿ ಪುನಃ ಇಸಿ ತೆಗೆದುಕೊಳ್ಳಬೇಕು ಎಂಬುವುದು ಸರಿಯಾದ ನಡೆಯಲ್ಲ. ಇದು ಸರ್ಕಾರದ ಕಡೆಯಿಂದ ಆಗಿರುವ ತಪ್ಪು, ಅವರೇ ಸರಿಪಡಿಸಬೇಕು. ರಾಜ್ಯದಲ್ಲಿ ಕೆಲವು ಕ್ವಾರಿ ಲೀಸ್‍ಗಳ ಅವಧಿ ಮುಗಿದಿದ್ದು ಅಥವಾ ಕಾರಣಾಂತರಗಳಿಂದ ಕ್ಲೋಸ್ ಆಗಿರುವ ಡೆಡ್ ರೆಂಟ್ ಬಾಕಿಯಿದೆ. ಈ ಬಾಕಿಯನ್ನು ಓಟಿಎಸ್ ನೀಡಿ ಪ್ರಕರಣವನ್ನು ಬಾಕಿ ಮುಕ್ತವಾಗಿ ಮಾಡಿ ಸಂಪೂರ್ಣವಾಗಿ ಕ್ಲೋಸ್ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ. ಬೆಂಗಳೂರಿನಲ್ಲಿ ಪ್ರಥಮ ಸಭೆ ನಡೆಸಿ ಸರ್ಕಾರ ಹೊರಡಿಸಿರುವ ಒಂದು ಸುತ್ತೋಲೆ ಹಿಡಿದು ನ್ಯಾಯಾಲಯಕ್ಕೆ ಹೋದ ಪರಿಣಾಮ ಸರ್ಕಾರಕ್ಕೆ ಮುಜುಗರವಾಗಿದೆ. ಎರಡು ಕಡೆ ರಾಯಲ್ಟಿ ವಸೂಲಿ ಮಾಡುತ್ತಿದೆ. ನೂತನ ಅಸೋಸಿಯೇಷನ್ ಕಾನೂನಾತ್ಮಕವಾಗಿರಬೇಕಾಗಿರುವುದರಿಂದ ಪ್ರತಿ ಜಿಲ್ಲೆಗಳಲ್ಲಿ ಸಭೆ ಕರೆದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಬಲಪಡಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.

ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಸಿ.ಎಸ್.ಭಾಸ್ಕರ್ ಮಾತನಾಡಿ, ನಮ್ಮ ಹೋರಾಟದ ಪ್ರತಿಫಲವಾಗಿ ಇಪ್ಪತ್ತು ವರ್ಷ ಸಿ.ಫಾರಂ ಆಯಿತು. ನಮ್ಮ ಬೇಡಿಕೆಗಳನ್ನು ಮೊದಲಿನಿಂದಲೂ ಸರ್ಕಾರದ ಮುಂದಿಡುತ್ತ ಬರುತ್ತಿದ್ದೇವೆ. ಕಾನೂನು ತಿದ್ದುಪಡಿಗಳ ಅವಶ್ಯಕತೆಯಿದೆ. ಕಾನೂನಾತ್ಮಕವಾಗಿರಬೇಕೆಂಬುದು ನಮ್ಮ ಉದ್ದೇಶ. ಒಂದೊಂದು ಜಿಲ್ಲೆಯಿಂದ 1200-1300 ಅರ್ಜಿಗಳು ಹೋಗಿವೆ. ಇನ್ನು ಯಾವುದು ಸರಿ ಹೋಗಿಲ್ಲ. ಒಗ್ಗಟ್ಟಿನಿಂದ ಹೋರಾಡೋಣ ಎಂದರು.

ಅಸೋಸಿಯೇಷನ್ ಉಪಾಧ್ಯಕ್ಷ ಎಚ್.ವಾಗೀಶ್ ಮಾತನಾಡಿ, ಹಿಂದಿನ ಫೆಡರೇಷನ್ ಸ್ಪಂದಿಸುತ್ತಿಲ್ಲ ಕಾರಣ ಹೊಸದಾಗಿ ಅಸೋಸಿಯೇಷನ್ ಆರಂಭಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳಲಾಗುವುದು. ಫೆಡರೇಷನ್ ಲೆಕ್ಕ ಕೊಟ್ಟಿಲ್ಲ. ಅವ್ಯವಹಾರವಾಗಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆಯಿರುವುದರಿಂದ ಹೊಸ ಅಸೋಸಿಯೇಷನ್‍ನ್ನು ಗಟ್ಟಿಯಾಗಿ ಕಟ್ಟಬೇಕಿದೆ ಎಂದು ಹೇಳಿದರು.

ಅಸೋಸಿಯೇಷನ್ ನಿರ್ದೇಶಕ ಉಸ್ಮಾನ್ ಘನಿ ಖಾಜಿ, ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಡಿ.ಆರ್.ಮಹೇಶ್, ಶಿವಮೊಗ್ಗ ಮಂಜಣ್ಣ, ವಿಜಯರ್ಶಮರ ಅಸೋಸಿಯೇಷನ್ ನಿರ್ದೇಶಕರುಗಳಾದ ವೆಂಕಟೇಶ್, ಮಲ್ಲಿಕಾರ್ಜುನ್, ಜಿ.ಬಿ.ಶೇಖರ್, ಸಂದೀಪ್, ಅಭಿಷೇಕ್ ಇದ್ದರು.