ಬೆಂಗೇರಿ ಉದಯನಗರದಲ್ಲಿ ತನ್ನ ಜಾಗೆ ಇಲ್ಲದಿದ್ದರೂ ತನ್ನದೇ ಜಾಗೆ ಎಂದು 25 ವರ್ಷದ ಹಿಂದೆಯೇ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಜಿಲ್ಲಾಡಳಿತ, ಹುಡಾ ಕೇಸ್‌ ದಾಖಲಿಸಬೇಕು. ಅವರ ಆಸ್ತಿ ಮಾರಿ ಮನೆ ಕಳೆದುಕೊಂಡು ಬೀದಿಪಾಲಾಗಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಯಾರದೋ ಜಾಗೆ, ಇನ್ಯಾರೋ ಮಾಲೀಕರು. ಅದನ್ನು ಕೆಲವರು ಖರೀದಿಸಿ ಮನೆ ಕಟ್ಟಿಕೊಳ್ಳುತ್ತಾರೆ. ಅವುಗಳನ್ನು ಮುಂದೊಂದು ದಿನ ತೆರವುಗೊಳಿಸಲಾಗುತ್ತದೆ. ವರ್ಷಗಟ್ಟಲೇ ತಮ್ಮದೇ ಮನೆ ಎಂದು ನಂಬಿಕೊಂಡು ಬದುಕು ಸವೆಸಿದವರೆಲ್ಲರೂ ಬೀದಿ ಪಾಲಾಗುತ್ತಾರೆ. ಇದಕ್ಕೆಲ್ಲ ಯಾರು ಹೊಣೆ?

ಇದು ಬೆಂಗೇರಿಯ ಉದಯನಗರದಲ್ಲಿನ ಬಡಾವಣೆಯೊಂದರಲ್ಲಿ ನಡೆದ ಘಟನೆಯ ಒಂದು ಸಾಲಿನ ವಿವರಣೆಯಷ್ಟೇ. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕುವುದು ಯಾವಾಗ? ಎಂಬ ಪ್ರಶ್ನೆ ಬೆಂಗೇರಿ ಘಟನೆಯಿಂದಾಗಿ ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.

ಆಗಿರುವುದೇನು?

ಬೆಂಗೇರಿ ಉದಯನಗರದಲ್ಲಿ ಕಳೆದ 25 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಆ ಜಾಗವೆಲ್ಲ ತನ್ನದೇ ಎಂದು ಹಲವರಿಗೆ ₹ 100 ಬಾಂಡ್‌ ಮೇಲೆ ಬರೆದು ಖರೀದಿ ಕೊಟ್ಟಿದ್ದಾರೆ. ಆ ಜಾಗವನ್ನು ಇವರೇ ಖರೀದಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಬಗೆಯ ಸೇಲ್‌ಡೀಡ್‌ ಇಲ್ಲ. ಸೇಲ್‌ಡೀಡ್‌ ಆಗದಿದ್ದಲ್ಲಿ ಇ-ಸ್ವತ್ತೂ ಆಗಿಲ್ಲ. ಏನಿದ್ದರೂ ಅಕ್ರಮವಾಗಿಯೇ ಮನೆ ಕಟ್ಟಿಕೊಳ್ಳಬೇಕು. ಮನೆ ಕಟ್ಟಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮಹಾನಗರ ಪಾಲಿಕೆ ಕುಡಿಯುವ ನೀರು, ಬೀದಿದೀಪ ನೀಡಿದೆ. ಹೆಸ್ಕಾಂ ಮನೆ ಮನೆಗೆ ವಿದ್ಯುತ್‌ ಕೊಟ್ಟಿದೆ. ರಸ್ತೆ ನಿರ್ಮಾಣವಾಗಿದೆ. ಇವೆಲ್ಲವನ್ನು ಪಾಲಿಕೆ ಮಾನವೀಯ ಆಧಾರದ ಮೇಲೆ ಮಾಡಿದೆ. ಮೂಲಸೌಲಭ್ಯ ಕೊಡುತ್ತಾ ಇರುವುದಕ್ಕೆ ಟ್ಯಾಕ್ಸ್‌ ವಸೂಲಿ ಮಾಡುತ್ತಾ ಬಂದಿದೆ. ಟ್ಯಾಕ್ಸ್‌ ಪಾವತಿ ಮಾಡುತ್ತಿದ್ದರಿಂದ ಇದೆಲ್ಲವೂ ತಮ್ಮದೇ ಎಂಬ ನಂಬುಗೆ ಅಲ್ಲಿನ ನಿವಾಸಿಗಳು ಬದುಕು ಸಾಗಿಸುತ್ತಿದ್ದರು. ಆದರೆ, ಮೂಲ ಜಾಗೆಯ ಮಾಲೀಕರು ಬೇರೆಯವರೇ ಇದ್ದರು. ಅವರು ಇದು ತಮ್ಮ ಜಾಗೆ, ಇಲ್ಲಿ ಅಕ್ರಮವಾಗಿ ವಾಸವಾಗಿದ್ದವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಕೋರ್ಟ್‌ನಲ್ಲಿ ಮೂಲ ಮಾಲೀಕರ ಪರವಾಗಿ ತೀರ್ಪು ಬಂದಿದೆ. ಪೊಲೀಸರ ನೆರವಿನೊಂದಿಗೆ ಅಲ್ಲಿರುವ ಬರೋಬ್ಬರಿ 47 ಮನೆಗಳನ್ನು ತೆರವು ಮಾಡಲಾಗಿದೆ. 20-25 ವರ್ಷಗಳಿಂದ ವಾಸಿಸುತ್ತಿದ್ದ 47 ಮನೆಗಳ ನಿವಾಸಿಗಳು ಇದೀಗ ಬೀದಿ ಪಾಲಾಗಿದ್ದಾರೆ. ಮುಂದೇನು ಎಂಬುದು ಅವರಿಗೆ ತಿಳಿಯದಂತಾಗಿದೆ.

ಇದು ಒಂದು ಅನಧಿಕೃತ ಬಡಾವಣೆಯ ಕಥೆಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಇಂಥ ನೂರಾರು ಬಡಾವಣೆಗಳಿವೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬರೋಬ್ಬರಿ 3,38,602 ಆಸ್ತಿಗಳಿವೆ. ಇವುಗಳಲ್ಲಿ ಎ ಖಾತಾ ಪಡೆದಿರುವ ಆಸ್ತಿಗಳು 1,32,096, ಬಿ ಖಾತಾ ಪಡೆದಿರುವ ಆಸ್ತಿಗಳ ಸಂಖ್ಯೆ 2573, ಡಬಲ್‌ ಟ್ಯಾಕ್ಸ್‌ ವಿಧಿಸಲ್ಪಟ್ಟ ಆಸ್ತಿಗಳ ಸಂಖ್ಯೆ (ಅಂದರೆ ಅಕ್ರಮ ಆಸ್ತಿಗಳು) 37,511. ಇಷ್ಟೊಂದು ಆಸ್ತಿಗಳು ಅಕ್ರಮವಾಗಿ ಎಂದರೆ ಕನಿಷ್ಠವೆಂದರೂ 200 ಆದರೂ ಅನಧಿಕೃತ ಬಡಾವಣೆಗಳು ಇರಬಹುದು ಎಂಬುದು ಅಂದಾಜಿಸಲಾಗಿದೆ.

ಇವು ಹುಟ್ಟಿಕೊಳ್ಳುವುದಕ್ಕೆ ಏನು ಕಾರಣ? ಹುಡಾ ಆಗ ಏನು ಮಾಡುತ್ತಿತ್ತು ? ಎಂಬ ಪ್ರಶ್ನೆ ಉದ್ಭವವಾಗಿವೆ. ಇದೀಗ ಹುಡಾ ಅಧ್ಯಕ್ಷರಾಗಿರುವ ಶಾಕೀರ ಸನದಿ ನಗರದಲ್ಲಿನ ಅನಧೀಕೃತ ಬಡಾವಣೆಗಳ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ. ಆ ಕೆಲಸದಲ್ಲೀಗ ಹುಡಾ ನಿರತವಾಗಿದೆ. ಹಾಗಾದರೆ ಈ ಹಿಂದೆ ಹುಡಾ ಅಧ್ಯಕ್ಷರಾದವರು, ಅಧಿಕಾರಿ ವರ್ಗ ಏನು ಮಾಡುತ್ತಿದ್ದರು? ಅದೇಕೆ ತಡೆಯುವ; ಕನಿಷ್ಠ ಪಕ್ಷ ಎಷ್ಟು ಅನಧಿಕೃತ ಬಡಾವಣೆಗಳಿವೆ ಎಂಬುದನ್ನು ಪತ್ತೆ ಹಚ್ಚುವ ಕೆಲಸವನ್ನೇಕೆ ಮಾಡಲಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಇದೀಗ ಹುಡಾದಿಂದ ಸಮೀಕ್ಷೆ ನಡೆಯುತ್ತಿದ್ದು ಮುಗಿದ ಮೇಲೆ ಅವುಗಳನ್ನು ಯಾವ ರೀತಿ ಸಕ್ರಮ ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬಹುದು.

ಆಸ್ತಿ ಮಾರಿ ಪರಿಹಾರ ಕೊಡಿ:

ಬೆಂಗೇರಿ ಉದಯನಗರದಲ್ಲಿ ತನ್ನ ಜಾಗೆ ಇಲ್ಲದಿದ್ದರೂ ತನ್ನದೇ ಜಾಗೆ ಎಂದು 25 ವರ್ಷದ ಹಿಂದೆಯೇ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಜಿಲ್ಲಾಡಳಿತ, ಹುಡಾ ಕೇಸ್‌ ದಾಖಲಿಸಬೇಕು. ಅವರ ಆಸ್ತಿ ಮಾರಿ ಮನೆ ಕಳೆದುಕೊಂಡು ಬೀದಿಪಾಲಾಗಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.ಕೋಟ್‌...

ಅಕ್ರಮ ಬಡಾವಣೆಗಳ ಹಾವಳಿ ವಿಪರೀತವಾಗಿದೆ. ಇದೀಗ ಸಮೀಕ್ಷೆ ಮಾಡಲು ತಿಳಿಸಿದ್ದು ಶೀಘ್ರದಲ್ಲೇ ಮುಗಿಸುವಂತೆ ಸೂಚಿಸುತ್ತೇನೆ. ಉದಯನಗರದಲ್ಲಿನ ಘಟನೆ ನಿಜಕ್ಕೂ ಬೇಸರದ ಸಂಗತಿ. ಹುಡಾದಿಂದ ಏನು ಕ್ರಮ ಕೈಗೊಳ್ಳಲು ಸಾಧ್ಯವೋ ನೋಡುತ್ತೇನೆ.

ಶಾಕೀರ ಸನದಿ, ಅಧ್ಯಕ್ಷ, ಹುಡಾಮಹಾನಗರ ಪಾಲಿಕೆಯಲ್ಲಿ ಅಕ್ರಮ ಬಡಾವಣೆಗಳ ಸಂಖ್ಯೆ ಸಿಗುವುದಿಲ್ಲ. ಆದರೆ ಅಕ್ರಮ ಆಸ್ತಿಗಳ ಸಂಖ್ಯೆ 37511 ಇವೆ. ಇವುಗಳಿಗೆ ಮಾನವೀಯ ಆಧಾರದ ಮೇಲೆ ಪಾಲಿಕೆಯಿಂದ ಮೂಲಭೂತ ಸೌಲಭ್ಯ ಕೊಡಲಾಗುತ್ತದೆ. ಹೀಗಾಗಿ ಟ್ಯಾಕ್ಸ್‌ ವಸೂಲಿ ಮಾಡಲಾಗುತ್ತದೆ. ಅಕ್ರಮ ಬಡಾವಣೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹುಡಾದ್ದು.

- ವಿಜಯಕುಮಾರ, ಉಪ ಆಯುಕ್ತ , ಮಹಾನಗರ ಪಾಲಿಕೆ

-----