ಸಾರಾಂಶ
- ಮತದಾರರ ವಿಶ್ವಾಸ ಗಳಿಸಿ ಕಣಕ್ಕಿಳಿದಿದ್ದೇನೆ ಎಂದು ಸೊರಟೂರಲ್ಲಿ ಹೇಳಿಕೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾನು ಯಾರ ಜೊತೆಯಲ್ಲೂ ಡೀಲ್ ಮಾಡಿಕೊಂಡಿಲ್ಲ. ಸ್ವಾಭಿಮಾನಿಯಾಗಿ ಜಿಲ್ಲೆಯ ಮತದಾರರ ವಿಶ್ವಾಸವನ್ನು ಗಳಿಸಿ, ಕಣಕ್ಕಿಳಿದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ವಿನಯಕುಮಾರ್ ಹೇಳಿದರು.ತಾಲೂಕಿನ ಸೊರಟೂರು ಗ್ರಾಮದ ಆಂಜನೆಯಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಬಾರಿ ತ್ರಿಕೋನ ಸ್ಪರ್ಧೆಯಾದರೂ ಅಂತಿಮವಾಗಿ ಪಕ್ಷೇತರ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಮತ ಎಣಿಕೆ ನಂತರ ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
30 ವರ್ಷಗಳಿಂದ ಶಾಮನೂರು ಹಾಗೂ ಜಿ.ಎಂ. ಸಿದ್ದೇಶ್ವರ ಕುಟುಂಬಗಳವರು ಮಾತ್ರ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಆದರೆ, ಕ್ಷೇತ್ರ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಈಗ ಚುನಾವಣೆ ಬಂದಿರುವುದರಿಂದ ರೈತರ ಬಗ್ಗೆ ಚಿಂತನೆ ನಾಟಕವಾಡುತ್ತಿದ್ದಾರೆ. ನಾನು ಸ್ಪರ್ಧೆ ಮಾಡಿರುವುದು ಗೆದ್ದು ಮನೆಯಲ್ಲಿ ಕುಳಿತುಕೊಳ್ಳುವುದಕ್ಕಲ್ಲ. ಸಂಸದರಾಗಿ ಆಯ್ಕೆಯಾಗೋದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಲಿಕ್ಕೆ ಮಾತ್ರ ಎಂದರು.ಜಿಲ್ಲೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೇಕಾದ ಅಭಿವೃದ್ಧಿ ಕಾರ್ಯ-ಯೋಜನೆಗಳನ್ನು ಮಾಡಲಾಗುವುದು. ಜಿಲ್ಲೆಗೆ ಕಾರ್ಖಾನೆಗಳನ್ನು ತರುತ್ತೇನೆ. ಆಗ ದುಡಿಯುವ ಕೈಗಳಿಗೆ ಕೆಲಸ ನೀಡಿದರೆ ಎಲ್ಲ ಬಡಕುಟುಂಬಗಳು ಆರ್ಥಿಕವಾಗಿ ಸದೃಢರಾಗುತ್ತಾರೆ. ಇದರತ್ತ ನಾನು ಹೆಜ್ಜೆ ಹಾಕುತ್ತೇನೆ ಎಂದು ತಿಳಿಸಿದರು.
ಎಲ್ಲ ಗ್ರಾಮಗಳಲ್ಲೂ ಯುವಕರು, ಹಿರಿಯರು ಸೇರಿ ಎಲ್ಲರೂ ನನ್ನನ್ನು ಮನೆ ಮಗನಂತೆ ಸ್ವಾಗತಿಸಿ ಹರಸುತ್ತಿದ್ದಾರೆ. ಇವರೆಲ್ಲರ ಹಾರೈಕೆಯಿಂದ ಜೂನ್ 4ರ ನಂತರ ಸಂಸದನಾಗಿ ಆಯ್ಕೆಯಾಗಿರುತ್ತೇನೆ ಎಂದರು. ಗೆದ್ದ ನಂತರ ನೀವು ಯಾರಿಗೆ ಬೆಂಬಲ ನೀಡುತ್ತಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಯಾರು ನನಗೆ ಬೆಂಬಲ ನೀಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ ಎಂದರು.ನೂರಾರು ಯುವಕರ ಪಡೆ: ಪಕ್ಷೇತರ ಅಭ್ಯರ್ಥಿ ವಿನಯಕುಮಾರ್ ಅವರು ಸೊರಟೂರು ಗ್ರಾಮಕ್ಕೆ ಆಗಮಿಸಿದಾಗ ನೂರಾರು ಯುವಕರು ಜೈಕಾರ ಹಾಕುತ್ತ ನೀವು ಈಗಾಗಲೇ ಗೆದ್ದಾಗಿದೆ, ಆದರೆ ಅಭಿವೃದ್ಧಿ ಮರೆಯಬೇಡಿ ಎನ್ನುವ ಮಾತು ಜೋರಾಗಿ ಕೇಳಿಬಂತು.
ಗ್ರಾಮದ ಹುಚ್ಚಪ್ಪ, ರುದ್ರಗೌಡ, ಹನುಮಂತಪ್ಪ, ಪ್ರಶಾಂತ್, ರಾಜು ಕಡಗಣ್ಣಾರ, ಯೋಗಿಶ್, ಎಂ.ಎನ್. ಹನುಮಂತಪ್ಪ, ದೊಡ್ಡಪ್ಪ, ಸುದೀಪ್ ಹಾಗೂ ಇತರರು ಇದ್ದರು. - - -ಟಾಪ್ ಕೋಟ್ ಸಂಸದನಾಗಿ ಆಯ್ಕೆಯಾದರೆ ಇನ್‍ಫೋಸಿಸ್, ವಿಪ್ರೋ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಭೇಟಿ ನೀಡಿ, ನಮ್ಮ ಜಿಲ್ಲೆಯ ಶಿಕ್ಷಣದ ಸರ್ವೋತೋಮುಖ ಅಭಿವೃದ್ಧಿಗೆ ಅವರ ಬಳಿ ಮಾತನಾಡುತ್ತೇನೆ. ಅವರ ಮುಖಾಂತರ ಬಡಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತೇನೆ
-ವಿನಯಕುಮಾರ, ಪಕ್ಷೇತರ ಅಭ್ಯರ್ಥಿ- - - -24ಎಚ್.ಎಲ್.ಐ1:
ಪಕ್ಷೇತರ ಅಭ್ಯರ್ಥಿ ವಿನಯಕುಮಾರ್ ಸೊರಟೂರು ಗ್ರಾಮಕ್ಕೆ ಆಗಮಿಸಿದಾಗ ನೂರಾರು ಯುವಕರು ಸ್ವಾಗತಿಸಿ, ಬೆಂಬಲ ವ್ಯಕ್ತಪಡಿಸಿದರು.