ಚನ್ನಪಟ್ಟಣ ಬಿಟ್ಟುಕೊಡುವ ಯಾವುದೇ ಒಪ್ಪಂದ ಆಗಿಲ್ಲ: ಎಚ್ಡಿಕೆ

| Published : Oct 11 2024, 11:47 PM IST

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ಷಣದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಒಪ್ಪಂದ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ಷಣದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಒಪ್ಪಂದ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾನು ಮೊದಲು ಸೂಚಿಸಿದ್ದೇ ಯೋಗೇಶ್ವರ್ ಹೆಸರು. ಲೋಕಸಭಾ ಚುನಾವಣೆ ನಡೆಯುವ ಸುಮಾರು ೨ ತಿಂಗಳ ಮುಂಚೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಯೋಗೇಶ್ವರ್ ಅವರಿಗೆ ಸ್ಪರ್ಧೆ ಮಾಡುವಂತೆ ಹೇಳಿದ್ದೆ. ಆದರೆ ನಂತರ ದೆಹಲಿಯಲ್ಲಿ ಗೃಹ ಸಚಿವರು ಡಾ.ಮಂಜುನಾಥ್ ಅವರನ್ನು ಒಪ್ಪಿಸುವಂತೆ ಹೇಳಿದರು. ಅಮಿತ್ ಶಾ ಅವರ ಮಾತಿಗೆ ನಾನು ತಲೆ ಭಾಗಿ, ಮಂಜುನಾಥ್ ಅವರನ್ನು ಬಿಜೆಪಿಯಿಂದ ಅಭ್ಯರ್ಥಿ ಮಾಡಲಾಯಿತು ಎಂದು ತಿಳಿಸಿದರು.

ನಾನು ಪ್ರಾಥಮಿಕವಾಗಿ ಯೋಗೇಶ್ವರ್‌ಗೆ ಎರಡು ಪಕ್ಷಗಳು ಒಟ್ಟಾಗಿದ್ರೆ ಗೆಲುವು ಸುಲಭ ಅಂತಾ ಹೇಳಿದ್ದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಗೆಲ್ಲುವ ಅವಕಾಶ ಇದೆ. ಈ ಅವಕಾಶ ಏಕೆ ಕಳೆದುಕೊಳ್ಳುತ್ತಿರಾ ನೀವು ನಿಂತುಕೊಳ್ಳಿ ಅಂತಾ ಸಿಪಿವೈಗೆ ಹೇಳಿದ್ದೆ ಎಂದು ತಿಳಿಸಿದರು.

ಮೈತ್ರಿಗೆ ಮೂಲ ನಾನೇ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಗೇಶ್ವರ್ ಯಾರ ಜತೆ ಹೇಳಿದ್ದಾರೋ ಗೊತ್ತಿಲ್ಲ. ಮೈತ್ರಿಗೆ ಮೂಲ ಯಾರು ಅಂತಾ ಹೇಳಿದ್ದಾರೋ ಅದು ನನಗೆ ಗೊತ್ತಿಲ್ಲ. ಯೋಗೇಶ್ವರ್‌ ಒಮ್ಮೆ ನನ್ನನ್ನು ಭೇಟಿ ಮಾಡಿದ್ದರು. ನಾನು ಅವರಿಗೆ ಕ್ಷೇತ್ರಕ್ಕೆ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ಹೇಳಿದ್ದೆ. ಇದು ಪ್ರಾರಂಭಿಕ ಹಂತವಾಗಿದ್ದು, ಹೊರಗಡೆ ಚರ್ಚೆ ಮಾಡಬೇಡಿ ಎಂದು ಹೇಳಿದ್ದೆ. ನಮ್ಮಲ್ಲೂ ಅಭ್ಯರ್ಥಿ ಹಾಕಬೇಕು, ಬೇಡ ಎಂಬ ಚರ್ಚೆಗಳು ನಡೆಯುತ್ತಿವೆ. ನೀವು ನಿಲ್ಲಬೇಕು ಅಂತಿದ್ದರೆ ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತಾ ತಿಳಿಸಿದ್ದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಹತ್ತಿರ ಅವರು ಮಾತನಾಡಿಲ್ಲ ಎಂದು ತಿಳಿಸಿದರು.

ನಿಖಿಲ್ ಅವರ ಸ್ಪರ್ಧೆ ಬಗ್ಗೆ ಈವರೆಗೂ ನಾನು ತೀರ್ಮಾನ ಮಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಅನ್ನೋದು ಅಷ್ಟೇ ನನ್ನ ಆಲೋಚನೆ. ಆ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿ ಯಾರು ಅನ್ನೋದನ್ನ ಬಿಜೆಪಿ, ಜೆಡಿಎಸ್‌ನ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆದ ನಂತರ ತೀರ್ಮಾನಿಸಲಾಗುತ್ತದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಓಡಾಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರ್ಯಾಣದಲ್ಲಿ ಕಾಂಗ್ರೆಸ್ ಆರು ತಿಂಗಳ ಮುಂಚೆಯೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಿತು. ಆದರೆ ಏನಾಯಿತು? ಚುನಾವಣೆಗಳು ಪ್ರಾರಂಭವಾದ ನಂತರ ನಡೆಯುವ ಬೆಳವಣಿಗೆಗಳ ಮೇಲೆ ನಡೆಯುತ್ತವೆ ಎಂದರು.

ಚನ್ನಪಟ್ಟಣದಲ್ಲಿ ನಾನು ಪ್ರಾಥಮಿಕ ಹಂತದ ಕಾರ್ಯಕರ್ತರ ಸಭೆಗಳನ್ನ ಮಾಡ್ತಿದ್ದೇವೆ. ಬಹುಶಃ ಇನ್ನೊಂದು ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಅಭಿಪ್ರಾಯ ಕ್ರೂಢೀಕರಿಸಿ ದೆಹಲಿಯ ಬಿಜೆಪಿ ನಾಯಕರು ಮತ್ತು ನಾವು ಸೇರಿ ಮಾತನಾಡುತ್ತೇವೆ. ಎನ್‌ಡಿಎ ಅಭ್ಯರ್ಥಿ ಯಾರು ಆಗಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದರು.

ಬಿಜೆಪಿ ಕಾರ್ಯಕರ್ತರು, ಮುಖಂಡರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ನಾವು ಕಳೆದ ಎರಡು ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದಿದ್ದೀವಿ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡಲ್ಲ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ. ನಮ್ಮಲ್ಲಿನ ಕೆಲವೊಂದಷ್ಟು ತಿಕ್ಕಾಟಕ್ಕೆ ಸ್ವಲ್ಪ ವೀಕ್ ಆಗಿದೆ. ಈಗ ಕಾರ್ಯಕರ್ತರು ಬಲಾಢ್ಯವಾಗಿ ಸಂಘಟನೆ ಮಾಡ್ತಿದ್ದಾರೆ. ಅದರಿಂದ ಅವರ ವಿಶ್ವಾಸ ಇಲ್ಲದೇ ಏನು ತೀರ್ಮಾನ ಮಾಡಲ್ಲ. ಅವರ ಪಕ್ಷದಲ್ಲಿ ಅವರು ಏನೇ ಚರ್ಚೆ ಮಾಡಿಕೊಂಡರು ಅದು ಅವರ ಸಂಘಟನೆ ವಿಚಾರ. ಅದನ್ನ ತಪ್ಪು ಅಂತ ನಾವು ಹೇಳಲ್ಲ ಎಂದರು.

ಬಾಕ್ಸ್‌.............

ಸೇಡಿನ ರಾಜಕಾರಣ ಅಲ್ಲದೇ ಮತ್ತೇನು?: ಎಚ್‌ಡಿಕೆ

ಚನ್ನಪಟ್ಟಣ: ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದರು. ಪಿಎಸಿಎಲ್ ಚೇರ್ಮೆನ್ ಅವರ ಪಕ್ಷದವರೇ ಇದ್ರಲ್ಲ.

ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಈಗ ಯಾತಕ್ಕೆ ಕೊಟ್ಟಿದ್ದಾರೆ ಇಲ್ಲಿಯವರೆಗೆ ಯಾಕೆ ಮಾಡಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ನಿಜಕ್ಕೂ ರಾಜ್ಯದ ತೆರಿಗೆ ಹಣ ಲೂಟಿ ಬಗ್ಗೆ ಮಾಹಿತಿ ಇದ್ದರೆ ಯಾವಾಗಲೋ ತನಿಖೆ ಆಗಬೇಕಿತ್ತು. ಈಗ ನಿಮ್ಮ ಪರಿಸ್ಥಿತಿಗಳಿಂದ ರಕ್ಷಣೆ ಪಡೆಯಲು ಈ ರೀತಿಯ ಬೆಳವಣಿಗೆ ಪ್ರಾರಂಭ ಮಾಡಿದ್ದೀರಿ. ಇದು ಯಾವುದೇ ರೀತಿಯ ಫಲ ನೀಡಲ್ಲ ಎಂದರು.

ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸೇಡಿನ ರಾಜಕಾರಣ ಅಲ್ಲದೇ ಮತ್ತೇನು.? ಪಾಪ ಪದೇಪದೇ ಕುಮಾರಸ್ವಾಮಿ ಮೇಲೆ ಎಫ್‌ಐಆರ್ ಇಲ್ವಾ ಅಂತಾರೆ, ಕುಮಾರಸ್ವಾಮಿ ಯಾಕೆ ರಾಜಿನಾಮೆ ಕೊಟ್ಟಿಲ್ಲ ಅಂತ ಕೇಳುತ್ತಾರೆ. ಕುಮಾರಸ್ವಾಮಿ ಮೇಲಿನ ಎಫ್‌ಐಆರ್‌ಗೆ ಬೇಲ್ ಪಡೆದಿದ್ದೇನೆ. ಕಾಂಗ್ರೆಸ್ ನಾಯಕರ ನಡವಳಿಕೆ, ಅಧಿಕಾರ ದುರ್ಬಳಕೆ ನೋಡಿ ವಕೀಲರ ಸಲಹೆ ಮೇರೆಗೆ ಬೇಲ್ ಪಡೆದಿದ್ದೇನೆ ಎಂದರು.

ನಾನು ನನ್ನ ಮೇಲೆ ತನಿಖೆ ಮಾಡಬೇಡಿ ಅಂತ ಹೇಳಿದ್ದೀನಾ? ತನಿಖೆ ಮಾಡಲು ಎಷ್ಟು ವರ್ಷ ಬೇಕು. ೧೨ ವರ್ಷಗಳಿಂದ ತನಿಖೆ ಮಾಡಬೇಕಾ? ಈಗ ಕಂಪ್ಲೆಂಟ್ ಕೊಡೊದು, ಕರೆದುಕೊಂಡು ಹೋಗಿ ಕೂರಿಸಿಕೊಳ್ಳೊದು ಮಾಡ್ತಿಲ್ವಾ? ತನಿಖೆ ಮಾಡಲಿ ಎಂದರು.

ಪೊಟೋ೧೦ಸಿಪಿಟಿ೨:

ಚನ್ನಪಟ್ಟಣದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು.