ನೇತಾಜಿ ವಿದ್ಯಾಸಂಸ್ಥೆ ಮುಚ್ಚುವ ನಿರ್ಧಾರ ಮಾಡಿಲ್ಲ: ಆಡಳಿತ ಮಂಡಳಿ ಸ್ಪಷ್ಟನೆ

| Published : Mar 27 2024, 01:00 AM IST

ನೇತಾಜಿ ವಿದ್ಯಾಸಂಸ್ಥೆ ಮುಚ್ಚುವ ನಿರ್ಧಾರ ಮಾಡಿಲ್ಲ: ಆಡಳಿತ ಮಂಡಳಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಲ್ಲಮಾವಟಿ ಗ್ರಾಮದ ಚಂಗೇಟಿರ ಕುಟುಂಬಸ್ಥರು ದಾನವಾಗಿ ನೀಡಿದ ಹತ್ತು ಎಕರೆ ಜಾಗದಲ್ಲಿ 1965ರಲ್ಲಿ ದಾನಿಗಳ ಸಹಾಯದಿಂದ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಆ ಕಟ್ಟಡವು ಶಿಥಿಲಾವಸ್ಥೆಗೆ ಬಂದಿದ್ದರಿಂದ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಹಿತದೃಷ್ಟಿಯಿಂದ ನೂತನ ಭವ್ಯ ಕಟ್ಟಡಕ್ಕೆ ಪ್ರೌಢಶಾಲೆಯನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯನ್ನು ಮುಚ್ಚುವ ಯಾವುದೇ ನಿರ್ಧಾರಕ್ಕೆ ಆಡಳಿತ ಮಂಡಳಿ ಬಂದಿಲ್ಲ. ಕೆಲವರು ಇಲ್ಲಸಲ್ಲದ ಹೇಳಿಕೆ ನೀಡುವುದರ ಮೂಲಕ ಶಾಲೆಯ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೇತಾಜಿ ಕೇಂದ್ರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಮನು ಮುತ್ತಪ್ಪ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಚಂಗೇಟಿರ ಕುಟುಂಬಸ್ಥರು ದಾನವಾಗಿ ನೀಡಿದ ಹತ್ತು ಎಕರೆ ಜಾಗದಲ್ಲಿ 1965ರಲ್ಲಿ ದಾನಿಗಳ ಸಹಾಯದಿಂದ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಆ ಕಟ್ಟಡವು ಶಿಥಿಲಾವಸ್ಥೆಗೆ ಬಂದಿದ್ದರಿಂದ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಹಿತದೃಷ್ಟಿಯಿಂದ ನೂತನ ಭವ್ಯ ಕಟ್ಟಡಕ್ಕೆ ಪ್ರೌಢಶಾಲೆಯನ್ನು ಸ್ಥಳಾಂತರಗೊಳಿಸಲಾಗಿದೆ. 2002ರಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಆಡಳಿತ ಮಂಡಳಿಯ ವತಿಯಿಂದ ತೆರೆಯಲಾಗಿದ್ದು ಹಲವಾರು ವರ್ಷಗಳ ಕಾಲ ನಿರಂತರವಾಗಿ ನಡೆಯಿತು. ವಿದ್ಯಾರ್ಥಿಗಳ ಕೊರತೆಯಿಂದಾಗಿ ಕೋವಿಡ್ ಅವಧಿಯಲ್ಲಿ ಸಮರ್ಪಕವಾಗಿ ಶಾಲೆ ನಿರ್ವಹಿಸಲಾಗದೆ ಶಾಲೆ ಮುಚ್ಚಲಾಯಿತು. ಈ ಕಟ್ಟಡಕ್ಕೆ ಪ್ರೌಢಶಾಲೆ ಸ್ಥಳಾಂತರಿಸಲಾಗಿದ್ದು ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ ಎಂದರು.

ಕೆಲವರು ಕ್ಷುಲ್ಲಕ ರಾಜಕೀಯ ಕಾರಣಕ್ಕಾಗಿ ಶಾಲೆ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಕೊರತೆ ಉಂಟಾಗಿರುವುದರಿಂದ ಸಮೀಪದ ಎಮ್ಮೆಮಾಡು ಹಾಗೂ ಅಯ್ಯಂಗೇರಿ ಭಾಗದಿಂದ ಉಚಿತವಾಗಿವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗುತ್ತಿದೆ. ಸ್ಥಳೀಯ ನಾಲ್ಕು ಗ್ರಾಮಗಳಿಂದ ಕೇವಲ 10-15 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು ಆರ್ಥಿಕವಾಗಿ ಹೊಡೆತ ಬೀಳುತ್ತದೆ.ಶಾಲೆಯ ಅಸ್ತಿತ್ವ ಉಳಿಸಿಕೊಳ್ಳಬೇಕು ಇತರರು ಆಕ್ರಮಣ ಮಾಡಬಾರದು ಎಂಬ ಉದ್ದೇಶದಿಂದ ಇತರ ಪಂಚಾಯಿತಿಗಳ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲೆಯ ಬಹುತೇಕ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುತ್ತಿದ್ದಾರೆ. ಮಹಾಸಭೆಯ ಒಪ್ಪಿಗೆ ಪಡೆದು ಮಹಾಸಭೆಯ ಅನುಮೋದನೆ ದೊರೆತ ಬಳಿಕವಷ್ಟೇ ಪ್ರೌಢಶಾಲೆಯನ್ನು ಇತರರಿಗೆ ಹಸ್ತಾಂತರಿಸುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇತರ ಸಂಸ್ಥೆಗಳಿಗೆ ಈಗಾಗಲೇ ಪರಭಾರೆ ಮಾಡುವ ಪ್ರಕ್ರಿಯೆ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಸ್ಥಳೀಯರ ಹಾಗೂ ಮಹಾಸಭೆ ಒಪ್ಪಿಗೆ ಪಡೆದೇ ಇತರ ಸಂಸ್ಥೆಗೆ ನೀಡಲಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಕೆ.ಸುತನ್ ಸುಬ್ಬಯ್ಯ ಮಾತನಾಡಿ, ಶಾಲೆಯ ಹಳೆಯ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿಯ ಸಾಮಗ್ರಿಗಳನ್ನು ಇರಿಸಿಕೊಳ್ಳಲು ಶಾಲಾ ಕೊಠಡಿ ಬಳಸಿಕೊಂಡಿದ್ದೇವೆ. ಜಲಜೀವನ್ ಮಿಶನ್ ಕೆಲಸ ನಿರ್ವಹಿಸುವ ಕಾರ್ಮಿಕರು ಇಲ್ಲಿದ್ದಾರೆ. ಶಾಲೆಯ ಹಳೆ ಕಟ್ಟಡದಲ್ಲಿ ಇವರು ಇದ್ದು ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಬಾಡಿಗೆ ನೀಡುತ್ತಿಲ್ಲ ಎಂದರು.

ಶಾಲೆ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಸಿಎನ್ ಅಚ್ಚಯ್ಯ ನಿರ್ದೇಶಕರಾದ ಟಿ.ಕೆ. ಅರುಣ್ ಕಾವೇರಪ್ಪ ,ಬಿ.ಬಿ ದೇವಿದೇವಯ್ಯ, ಟಿ.ಎಂ. ವರುಣ್ ಸುಬ್ಬಯ್ಯ , ಬೊಟ್ಟೋಳ೦ಡ ಗಿರೀಶ್ ಹಾಜರಿದ್ದರು.