ಸಂವಿಧಾನವಿಲ್ಲದೇ ಪ್ರಜಾಪ್ರಭುತ್ವವಿಲ್ಲ: ಕಾನೂನು ವಿವಿ ಕುಲಪತಿ ಬಸವರಾಜು

| Published : Nov 27 2024, 01:05 AM IST

ಸಂವಿಧಾನವಿಲ್ಲದೇ ಪ್ರಜಾಪ್ರಭುತ್ವವಿಲ್ಲ: ಕಾನೂನು ವಿವಿ ಕುಲಪತಿ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಟ್ಟು ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಅಸಮಾನತೆ ಕಿತ್ತೊಗೆಯುವ ರಕ್ಷಣೆಯನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದು.

ಹುಬ್ಬಳ್ಳಿ:

ಸಂವಿಧಾನವಿಲ್ಲದೆ ಪ್ರಜಾಪ್ರಭುತ್ವವಿಲ್ಲ ಎಂದು ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿವಿಯ ಕಾನೂನು ಶಾಲೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕಾನೂನು ಸೇವಾ ಕೋಶದ ವತಿಯಿಂದ ನಡೆದ ಸಂವಿಧಾನ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾನವನಿಗಷ್ಟೆ ಅಲ್ಲದೇ ಗಿಡ, ಮರ, ಪ್ರಾಣಿ, ಪಕ್ಷಿಗಳಿಗೂ ಬದುಕುವ ಸ್ವತಂತ್ರ ಕೊಟ್ಟ ಸಂವಿಧಾನವಿದ್ದರೆ ಅದು ಭಾರತ ಸಂವಿಧಾನ ಎಂದ ಅವರು, ವಿಶ್ವಾದ್ಯಂತ ಅನೇಕ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಡಾ. ಅಂಬೇಡ್ಕರ್‌ ಅವರ ಬರಹ, ಪುಸ್ತಕ ಸಂಗ್ರಹಿಸಿ ಇಟ್ಟಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಟ್ಟು ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಅಸಮಾನತೆ ಕಿತ್ತೊಗೆಯುವ ರಕ್ಷಣೆಯನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದು. ಹೀಗಾಗಿ ಪ್ರತಿಯೊಬ್ಬರು ಸಂವಿಧಾನದ ಅರಿತುಕೊಳ್ಳಬೇಕು. ಅದರಂತೆ ಬದುಕು ಸಾಗಿಸಬೇಕು ಎಂದರು.

ವಿವಿ ಕುಲಸಚಿವೆ ಡಾ. ರತ್ನಾ ಭರಮಗೌಡರ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಪ್ರೊ. ಡಾ. ಜಿ.ಬಿ. ಪಾಟೀಲ ಮಾತನಾಡಿ, ವಿವಿಧೆತೆಯಲ್ಲಿ ಏಕತೆ ಸಾರುವುದೇ ಭಾರತೀಯ ಸಂವಿಧಾನ. ವಿಶ್ವದಲ್ಲೇ ಸಮಗ್ರ ಮತ್ತು ಬಲಿಷ್ಠ ಸಂವಿಧಾನವನ್ನು ಅಂಬೇಡ್ಕರ್‌ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಆಡಳಿತಾಂಗ ಕುಲಸಚಿವರಾದ ಅನುರಾಧ ವಸ್ತ್ರದ ಮಾತನಾಡಿ, ಸಂವಿಧಾನ ದೇಶದ ಸುಪ್ರೀಂ ಕಾನೂನು ಆಗಿದೆ. ಸಮಾನತೆ, ಸಹೋದರತೆ ಮತ್ತು ಭ್ರಾತೃತ್ವ ಸಾರುವ ಏಕೈಕ ಸಂವಿಧಾನ ಅದುವೇ ಭಾರತೀಯ ಸಂವಿಧಾನ ಎಂದರು.

ಸಂವಿಧಾನ ದಿನದಂಗವಾಗಿ ಕಾನೂನು ವಿವಿ ವಿದ್ಯಾರ್ಥಿಗಳು ಬೃಹತ್‌ ಜಾಗೃತಿ ಜಾಥಾ ನಡೆಸಿದರು. 1200ಕ್ಕೂ ಅಧಿಕ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಸಂವಿಧಾನ ದಿನದಂಗವಾಗಿ ಸಂವಿಧಾನ ಸಪ್ತಾಹ ಆಚರಿಸಲಾಯಿತು,. ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪ್ರಬಂಧ, ಮಾತುಗಾರಿಕೆ, ಪೋಸ್ಟರ್‌ ಅಭಿಯಾನ ಸ್ಪರ್ಧೆ ನಡೆಸಲಾಯಿತು. ಮಂಗಳವಾರ ಜಾಥಾದ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.

ಕಾನೂನು ವಿವಿಯ ಹಣಕಾಸು ಅಧಿಕಾರಿ ಸಂಜೀವಕುಮಾರ್ ಸಿಂಗ್, ಕಾರ್ಯಕ್ರಮ ಸಂಯೋಜಕ ಐ.ಬಿ. ಬಿರಾದಾರ್‌ ಮತ್ತು ಡಾ. ಭೀಮಾಬಾಯಿ ಎಸ್. ಮೂಲಗೆ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ರಶ್ಮಿ ಕೌಶಿಕ ಪ್ರಾರ್ಥಿಸಿದರು, ಪ್ರತಿಕ್ಷಾ ವಿ. ಕುಲಕರ್ಣಿ ನಿರೂಪಿಸಿದರು, ಸೃಷ್ಟಿ ಗೋಲೆಕರ ಸ್ವಾಗತಿಸಿದರು. ಅಭಿಷೇಕ ಹಮ್ಮಿಗಿ ವಂದಿಸಿದರು.