ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕೊರಟಗೆರೆ ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ (ಜಂಪೇನಹಳ್ಳಿ ಕ್ರಾಸ್) ಗ್ರಾಮದಲ್ಲಿ ಯಾವುದೇ ಸಕ್ರಿಯ ಡೆಂಘೀ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಕೊರಟಗೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ.ಅನಂತರಾಮು ಸ್ಪಷ್ಟನೆ ನೀಡಿದ್ದಾರೆ.ಸ್ವಚ್ಚತೆಯಿಲ್ಲದೆ ಅನೈರ್ಮಲ್ಯಯಿಂದ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅಗ್ರಹಾರ ಗ್ರಾಮ ಪಂಚಾಯಿತಿಗಿಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಶಿವಪುರ ಗ್ರಾಮದಲ್ಲಿ ಡೆಂಗ್ಯೂ ಶಂಕಿತ ಪ್ರಕರಣದಲ್ಲಿ ದಾಖಲಾಗಿದ್ದ 3 ಮಂದಿ ಗುಣಮುಖರಾಗಿದ್ದಾರೆ. ಕೊರಟಗೆರೆ ತಾಲೂಕಿನಲ್ಲಿ ಇದುವರೆಗೆ 45 ಡೆಂಘೀ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 3 ಪ್ರಕರಣಗಳು ಮಾತ್ರ ಸಕ್ರಿಯವಾಗಿದ್ದು, ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.ಶಿವಪುರ ಗ್ರಾಮದ ಕೆಲವು ಭಾಗಗಳಲ್ಲಿ ಮಳೆಯಿಂದಾಗಿ ಗಿಡಗಂಟಿಗಳು ಬೆಳೆದಿರುವುದು ಕಂಡು ಬಂದಿದ್ದು, ಕೂಡಲೇ ಗ್ರಾಮದ ರಸ್ತೆಗಳು ಹಾಗೂ ಚರಂಡಿ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಮದಲ್ಲಿ ಧೂಮೀಕರಣ ಮಾಡಿಸುವಂತೆ ಅಗ್ರಹಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಭೇಟಿ ಸಂದರ್ಭದಲ್ಲಿ ಕೊರಟಗೆರೆ ತಾಲೂಕು ಆರೋಗ್ಯಾಧಿಕಾರಿ ಡಾ: ವಿಜಯ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುನಿಯಯ್ಯ, ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.