ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ತಾರತಮ್ಯ ಮಾಡದೆ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ೨೦೨೫-೨೬ರ ನೇಮಕಾತಿಯಲ್ಲಿ ಪರಿಗಣಿಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಸಾಂಕೇತಿಕ ಮೌನ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೧೦,೯೭೬ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಅತ್ಯಂತ ಕನಿಷ್ಠ ಗೌರವಧನ ಪಡೆದು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸೇವಾ ವಿಲೀನತೆ, ಭದ್ರತೆ, ಗೌರವಧನ ಹೆಚ್ಚಳ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ದಶಕಗಳಿಂದ ಮನವಿ, ಭಿನ್ನವತ್ತಳೆಯನ್ನು ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಿ ಎಲ್ಲಾ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ೨೨.೧೨.೨೦೨೩ರಂದು ನಡೆಸಿದ ಸಭೆಯಲ್ಲಿ ಗೌರವಧನ ಹೆಚ್ಚಳ, ತಿಂಗಳಿಗೆ ಒಂದು ರಜೆ, ಅತಿಥಿ ಉಪನ್ಯಾಸಕರ ನೇಮಕಾತಿಗೆ ಪ್ರತಿ ವರ್ಷ ಅರ್ಜಿ ಕರೆಯದೆ, ದಾಖಲಾತಿ ಪರಿಶೀಲಿಸದೆ ಹಿಂದಿನ ವರ್ಷದ ಅರ್ಜಿಯನ್ನೇ ಪರಿಗಣಿಸುವುದು, ನಿವೃತ್ತಿಯ ನಂತರ ೫ ಲಕ್ಷ ಇಡಿಗಂಟು ಸೌಲಭ್ಯ, ಆರೋಗ್ಯ ವಿಮೆ, ಕೌನ್ಸಿಲಿಂಗ್ ಸರಳೀಕರಣ ಈ ಎಲ್ಲಾ ಬೇಡಿಕೆಗಳು ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಕೈಗೊಂಡ ತೀರ್ಮಾನಗಳಾಗಿವೆ. ಈ ಎಲ್ಲಾ ಸೌಲಭ್ಯಗಳು ಅನೇಕ ದಶಕಗಳಿಂದ ಕನಿಷ್ಠ ಗೌರವಧನಕ್ಕೆ ಈವರೆಗೂ ಸೇವೆ ಸಲ್ಲಿಸುತ್ತಾ ಬಂದಿರುವ ಯುಜಿಸಿ ಅರ್ಹತೆ ಇಲ್ಲದ ಕಾರಣಕ್ಕೆ ಅತಿಥಿ ಉಪನ್ಯಾಸಕರ ಸೇವೆಯಿಂದ ಹೊರಗುಳಿದರೆ ಅವರು ಅವಕಾಶದಿಂದ ವಂಚಿತರಾಗುತ್ತಾರೆ ಎಂದರು.
ಅತಿಥಿ ಉಪನ್ಯಾಸಕರ ಪ್ರಸ್ತುತ ಸಮಸ್ಯೆಯನ್ನು ಸರ್ಕಾರದ ಹಂತದಲ್ಲಿ ಅಥವಾ ಸಚಿವ ಸಂಪುಟ ಸಮಿತಿಯ ಮುಂದೆ ತಂದು ಇತ್ಯರ್ಥಪಡಿಸುವಂತೆ ಹಾಗೂ ಸೇವಾ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರದ ಕೊರತೆ, ವರ್ಗಾವಣೆ ಪರಿಣಾಮದಿಂದ ಸೇವೆಯಿಂದ ಹೊರಗುಳಿದವರನ್ನು ಸೇವೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ೪೦-೬೦ರ ಅನುಪಾತದಲ್ಲಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ, ವಿಜ್ಞಾನ, ಗಣಕ ವಿಜ್ಞಾನ, ಇತರೆ ವಿಭಾಗಗಳನ್ನು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ತರಗತಿಗಳನ್ನು ವಿಭಜಿಸಿ ಕಾರ್ಯಭಾರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವಿ.ಪಿ.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಬಿ.ಎಸ್.ನಾಗರಾಜು, ನಂದೀಶ್, ಡಾ.ಕಿರಣ್, ಟಿ.ಎನ್.ಸಂಜಯ್, ಎಚ್.ಬಿ.ಶ್ರೀನಿವಾಸ್, ಶಿವಕುಮಾರ್, ಚೇತನ್, ಬೋರಯ್ಯ, ರವಿಕುಮಾರ್ ಇತರರಿದ್ದರು.