ಸಾರಾಂಶ
ಸಂಸತ್ ಚುನಾವಣೆಯಲ್ಲಿ ನನ್ನ ವಿರುದ್ದದ ಅಪಪ್ರಚಾರಕ್ಕೆ ಕಿವಿ ಕೊಡದೆ ಪಕ್ಷ, ಜಾತಿ ನೋಡದೆ ಎಲ್ಲರೂ ಮತ ಹಾಕಿದ್ದೀರಿ. ನಾನೂ ಕೂಡ ಜಾತಿ ಪಕ್ಷ ನೋಡದೆ ಜಿಲ್ಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದೇನೆ. ದೇಶದಲ್ಲೇ ತುಮಕೂರು ಜಿಲ್ಲೆಯನ್ನು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಸಂಸತ್ ಚುನಾವಣೆಯಲ್ಲಿ ನನ್ನ ವಿರುದ್ದದ ಅಪಪ್ರಚಾರಕ್ಕೆ ಕಿವಿ ಕೊಡದೆ ಪಕ್ಷ, ಜಾತಿ ನೋಡದೆ ಎಲ್ಲರೂ ಮತ ಹಾಕಿದ್ದೀರಿ. ನಾನೂ ಕೂಡ ಜಾತಿ ಪಕ್ಷ ನೋಡದೆ ಜಿಲ್ಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದೇನೆ. ದೇಶದಲ್ಲೇ ತುಮಕೂರು ಜಿಲ್ಲೆಯನ್ನು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲೂ ರೈಲ್ವೆ ಗೇಟ್ ಇಲ್ಲದಂತೆ ಮಾಡಿ ರೈಲು ಮತ್ತು ಇತರೆ ವಾಹನಗಳು ತಡೆರಹಿತವಾಗಿ ಓಡಾಡುವಂತೆ ಮಾಡತ್ತೇನೆ. ನೆನೆಗುದಿಗೆ ಬಿದ್ದಿರುವ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ನಿಂತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆರಂಭಿಸಿದ್ದೇನೆ. ಗುಬ್ಬಿಯಿಂದ ತುಮಕೂರು ರಸ್ತೆಯನ್ನು ಬೆಂಗಳೂರಿನ ಎಂಜಿ ರಸ್ತೆ ರೀತಿ ಮಾಡುತ್ತೇನೆ. ಶಿರಾದಿಂದ ಕೆ.ಬಿ.ಕ್ರಾಸ್ ವರೆವಿಗೆ ಬುಕ್ಕಾಪಟ್ಟಣ ಮಾರ್ಗವಾಗಿ ರಸ್ತೆ ಅಭಿವೃದ್ಧಿಗೆ ಕೈ ಹಾಕಿದ್ದೇನೆ. ಹಾಸನದಿಂದ ಹಿರಿಯೂರಿಗೆ ಕೇವಲ 1 ಗಂಟೆಯಲ್ಲಿ ಪ್ರಯಾಣಿಸುವ ಎಕ್ಸ್ ಪ್ರೆಸ್ ಹೈವೆಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ಪೂಣೆಯಿಂದ ತುಮಕೂರು ಜಿಲ್ಲೆ ಮಾರ್ಗವಾಗಿ ಬೆಂಗಳೂರಿಗೆ 55 ಸಾವಿರ ಕೋಟಿ ರು. ವೆಚ್ಚದ ಹೈವೆ ಕಾಮಗಾರಿ ಮಂಜೂರು ಮಾಡಿಸಿದ್ದೇನೆ ಎಂದು ವಿವರಿಸಿದರು.ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಮಾತನಾಡಿ ಹೋಬಳಿ ಮಟ್ಟದಲ್ಲಿ ಸಂಸದರೊಬ್ಬರು ಜನ ಸಂಪರ್ಕ ಸಭೆ ನಡೆಸುತ್ತಿರುವುದು ಇದೇ ಮೊದಲು. ಸಂಸದರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮೇಲೆ ವಿಶೇಷ ಕಾಳಜಿ ಇಟ್ಟುಕೊಂಡಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ತಲೆದೂರಲಾರದು. ತಾಲೂಕಿನಲ್ಲಿ ಸಾಮಾಜಿಕ ಪಿಂಚಣಿಗೆ ಯಾವ ಅರ್ಜಿಗಳು ಬರುತ್ತಿಲ್ಲ. ಬಂದರೂ ಕೂಡ ವಾರದೊಳಗೆ ಮಂಜೂರು ಮಾಡಿಸುತ್ತಿದ್ದೇವೆ. ಬಗರ್ ಹುಕುಂನ 2 ಸಾವಿರ ಅರ್ಜಿಗಳನ್ನು ವಿಲೆ ಮಾಡಿದ್ದೇವೆ. ಇನ್ನೂ 27 ಸಾವಿರ ಅರ್ಜಿ ಬಾಕಿ ಇದ್ದು 6 ತಿಂಗಳೂಳಗೆ ಅರ್ಹರಿಗೆ ಸಾಗುವಳಿ ಚೀಟಿ ಕೊಡುತ್ತೇವೆ. ತಾಲೂಕಿಗೆ ಹರಿಯುತ್ತಿರುವ ಹೇಮಾವತಿ ನಾಲೆ ದುರಸ್ತಿ ಮಾಡಲು 125 ಕೋಟಿ ರು. ಅಗತ್ಯವಿದ್ದು ಸಚಿವರು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕೆ.ಪುರಂದರ, ತಾಪಂ ಇಒ ದೊಡ್ಡಸಿದ್ಧಯ್ಯ, ಪಪಂ ಅದ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಸಹಾಯಕ ಕೃಷಿ ಅಧಿಕಾರಿ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ಪಶು ಇಲಾಖೆಯ ಸಹಾಕಯ ನಿದಶಕ ರೆ.ಮಾ.ನಾಗಭೂಷಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.