ಈದ್ ಮಿಲಾದ್‌ ಮೆರವಣಿಗೆ ಡಿಜೆ ಅನುಮತಿ ಇಲ್ಲ: ಎನ್. ಶಶಿಕುಮಾರ್

| Published : Sep 05 2025, 01:00 AM IST

ಈದ್ ಮಿಲಾದ್‌ ಮೆರವಣಿಗೆ ಡಿಜೆ ಅನುಮತಿ ಇಲ್ಲ: ಎನ್. ಶಶಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷದಂತೆ ಈ ವರ್ಷವೂ ಹಿಂದೂ-ಮುಸ್ಲಿಂ ಭಾವೈಕ್ಯತೆ ನಗರದಲ್ಲಿ ಕಂಡು ಬಂದಿದೆ. ಈದ್ ಮಿಲಾದ್ ಹಾಗೂ ಗಣೇಶ ಹಬ್ಬ ಒಂದೇ ಬಾರಿ ಬಂದಿರುವ ಹಿನ್ನೆಲೆ ಮೇಲುಸ್ತುವಾರಿಯನ್ನು ಕ್ರೈಮ್ ಎಡಿಜಿಪಿ ಆಗಿರುವ ಹರೀಶೇಖರನ್ ಅವರು ವಹಿಸಿಕೊಂಡಿದ್ದಾರೆ. ಬುಧವಾರ ಎಲ್ಲ ಅಧಿಕಾರಿಗಳನ್ನು ಕರೆದು ಸೂಚನೆಗಳನ್ನು ನೀಡಿದ್ದಾರೆ.

ಹುಬ್ಬಳ್ಳಿ: ಈದ್ ಮಿಲಾದ್ ಹಬ್ಬಕ್ಕೆ ಡಿಜೆಗೆ ಅನುಮತಿ ನೀಡಿಲ್ಲ. ಗಣೇಶ ವಿಸರ್ಜನೆಗೆ ಸುಮಾರು 3,000 ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಹಿಂದೂ-ಮುಸ್ಲಿಂ ಭಾವೈಕ್ಯತೆ ನಗರದಲ್ಲಿ ಕಂಡು ಬಂದಿದೆ. ಈದ್ ಮಿಲಾದ್ ಹಾಗೂ ಗಣೇಶ ಹಬ್ಬ ಒಂದೇ ಬಾರಿ ಬಂದಿರುವ ಹಿನ್ನೆಲೆ ಮೇಲುಸ್ತುವಾರಿಯನ್ನು ಕ್ರೈಮ್ ಎಡಿಜಿಪಿ ಆಗಿರುವ ಹರೀಶೇಖರನ್ ಅವರು ವಹಿಸಿಕೊಂಡಿದ್ದಾರೆ. ಬುಧವಾರ ಎಲ್ಲ ಅಧಿಕಾರಿಗಳನ್ನು ಕರೆದು ಸೂಚನೆಗಳನ್ನು ನೀಡಿದ್ದಾರೆ. ಅವರು ಹೇಳಿದ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಬಂದೋಬಸ್ತ್ ಮಾಡಲಾಗಿದೆ ಎಂದರು.

ಈದ್ ಮಿಲಾದ್‌ಗೂ ಹುಬ್ಬಳ್ಳಿಯಲ್ಲಿ ಒಂದು ಲಕ್ಷ, ಧಾರವಾಡದಲ್ಲಿ 40 ಸಾವಿರ ಜನ ಸೇರುವ ಸಾಧ್ಯತೆ ಇದೆ. ಅಂಜುಮನ್ ಕಮಿಟಿ ಹಾಗೂ ಮುಸ್ಲಿಂ ಮುಖಂಡರು ಡಿಜೆಗೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ, ಅನುಮತಿ ನೀಡಿಲ್ಲ ಎಂದರು.

ಬಿಗಿಭದ್ರತೆ: 9ನೇ ದಿನದ ಗಣೇಶ ಮೂರ್ತಿಗಳ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾರ್ಗದರ್ಶನದಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಜತೆಗೆ ಕೆಎಸ್‌ಆರ್‌ಪಿ ತುಕಡಿಗಳ ಪಹರೆ ಹಾಕಿ ಭದ್ರತೆ ಒದಗಿಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಪೊಲೀಸ್ ಕಮಿಷನರ್, ಡಿಸಿಪಿಗಳ ನೇತೃತ್ವದಲ್ಲಿ ಇಲ್ಲಿಯ ಈದ್ಗಾ ಮೈದಾನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸುವ ಕಾರ್ಯ ಅಚ್ಚುಕಟ್ಟಾಗಿ ನಡೆದಿತ್ತು. ಇದೇ ಹಿನ್ನೆಲೆಯಲ್ಲಿ ಮೆರವಣಿಗೆಯುದ್ಧಕ್ಕೂ ಪೊಲೀಸ್ ಪಹರೆ ಹಾಕಿ ಶಾಂತಿಯುತ ಮೆರವಣಿಗೆ ಅನುವು ಮಾಡಲಾಯಿತು.