ಸಾರಾಂಶ
ಬುಧವಾರ ಮೂರನೇ ಚುಚ್ಚುಮದ್ದು ಹಾಕಬೇಕಾಗಿತ್ತು. ಆದರೆ ಆಸ್ಪತ್ರೆಗೆ ತೆರಳಿದಾಗ ಚುಚ್ಚುಮದ್ದು ಇಲ್ಲ.
ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದು ಇಲ್ಲ ಎಂದು ಹೇಳಿ ಚಿಕಿತ್ಸೆಗಾಗಿ ಬೇರೆಡೆ ಹೋಗುವಂತೆ ತಿಳಿಸಿದ ಘಟನೆ ನಡೆದಿದೆ.
ಗ್ರಾಮದ ಬಸವರೆಡ್ಡಿ ಎಂಬವರ ಪುತ್ರ ರಾಘವೇಂದ್ರ ರೆಡ್ಡಿ ನಾಯಿ ಕಡಿತಕ್ಕೆ ಕೆಲ ದಿನಗಳ ಹಿಂದೆ ಒಳಗಾಗಿದ್ದರು. ಬುಧವಾರ ಮೂರನೇ ಚುಚ್ಚುಮದ್ದು ಹಾಕಬೇಕಾಗಿತ್ತು. ಆದರೆ ಆಸ್ಪತ್ರೆಗೆ ತೆರಳಿದಾಗ ಚುಚ್ಚುಮದ್ದು ಇಲ್ಲ. ತೆಕ್ಕಲಕೋಟೆ ಇಲ್ಲವೇ ಸಿರುಗುಪ್ಪ ಪಟ್ಟಣದ ಆಸ್ಪತ್ರೆಗೆ ತೆರಳುವಂತೆ ವೈದ್ಯ ಡಾ.ಬಾಲಾಜಿ ತಿಳಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸೋಮವಾರ ಇಬ್ಬರು, ಮಂಗಳವಾರ ಮೂವರು, ಬುಧವಾರ 6 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು ಚಿಕಿತ್ಸೆಗಾಗಿ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.ಕಳೆದ 15 ದಿನಗಳಲ್ಲಿ 20ಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಒಳಗಾಗಿದ್ದು, ನಿತ್ಯವೂ ಕರೂರು ಗ್ರಾಮದಿಂದ 2 ರಿಂದ 3 ಜನ ಚಿಕಿತ್ಸೆಗೆ ತೆರಳುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚುಚ್ಚುಮದ್ದು ಹಾಕಲೇಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದಾಗ ವೈದ್ಯಾಧಿಕಾರಿ ಡಾ.ಬಾಲಾಜಿ ಖಾಸಗಿ ಔಷಧಿ ಕೇಂದ್ರದಿಂದ ಚುಚ್ಚುಮದ್ದು ತರಿಸಿ ಹಾಕಿದ್ದಾರೆ.ಈ ಆಸ್ಪತ್ರೆಯ ಕೇಂದ್ರದಲ್ಲಿ ಸ್ಟಾಕ್ ರಿಜಿಸ್ಟರ್ ನಲ್ಲಿ ಔಷಧಿ ದಾಸ್ತಾನಿನ ಕುರಿತು ಯಾವುದೇ ಮಾಹಿತಿ ಇಲ್ಲ. ಫಲಕ ಅಳವಡಿಸಿಲ್ಲ. ನಾಯಿ ಕಡಿತದ ಔಷಧಿ ಆಸ್ಪತ್ರೆಯಲ್ಲಿ ಇಲ್ಲದೇ ಇರುವುದು ವೈದ್ಯರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದರು.