ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆ.ಆರ್.ಪೇಟೆ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನ ಕೋಡಿಮಾರನಹಳ್ಳಿ, ಕಿಕ್ಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರು ಸಾಗಿದ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾದು ನಿಂತು ಜಯಘೋಷಗಳನ್ನು ಕೂಗಿ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ಟಿಂಗ್ ಆಪರೇಷನ್ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಲ್ಲ. ಮೊದಲು ತನಿಖೆ ವರದಿ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಾಸನ ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ಕನಕಮೂರ್ತಿ ಲೋಕಾರ್ಪಣೆ ನಿಮಿತ್ತ ಮಾರ್ಗ ಮಧ್ಯೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಸ್ಟಿಂಗ್ ಆಪರೇಷನ್ ಬಗೆಗೆ ಈಗಾಗಲೇ ದೂರು ಕೊಟ್ಟಿದ್ದೇನೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ನಮ್ಮ ರಾಜ್ಯದ ಪೊಲೀಸರು ಪ್ರಾಮಾಣಿಕರು, ದಕ್ಷರಿದ್ದಾರೆ. ಈ ಪ್ರಕರಣದಲ್ಲಿ ಸತ್ಯವೇ ಇಲ್ಲದಿರುವಾಗ ಪ್ರತಿನಿತ್ಯ ನಾನೇಕೆ ಪ್ರತಿಕ್ರಿಯಿಸಲಿ ಎಂದರು.

ಸರ್ಕಾರದ ನಿರ್ಧಾರಗಳು ನನ್ನ ಅರಿವಿಗೆ ಬರಲ್ಲ:

ನಾನು ಈಗ ರಾಜ್ಯದ ಮುಖ್ಯಮಂತ್ರಿಯಲ್ಲ. ಈಗಿನ ಸರ್ಕಾರದ ನಿರ್ಧಾರಗಳು ನನ್ನ ಅರಿವಿಗೆ ಬರುವುದಿಲ್ಲ. ಆದ್ದರಿಂದ ಸರ್ಕಾರದ ನೀತಿ ನಿರ್ಧಾರಗಳ ಬಗೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ರಾಜ್ಯದಲ್ಲಿ ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ರೈತರ ಜಾನುವಾರುಗಳ ಮೇವಿನ ಅಭಾವವು ಸ್ವಲ್ಪಮಟ್ಟಿಗೆ ನೀಗಿದೆ. ದಸರಾ ಉತ್ತಮವಾಗಿ ನಡೆದಿದೆ. ಒಂದು ದೊಡ್ಡ ಕಾರ್ಯಕ್ರಮ ಮಾಡುವಾಗ ಸಣ್ಣಪುಟ್ಟ ಲೋಪದೋಷಗಳಾಗುತ್ತವೆ. ಅದನ್ನೆ ದೊಡ್ಡದು ಮಾಡುವುದು ಬೇಡ ಎಂದು ಹೇಳಿದರು.

ನಿಮ್ಮ ಪ್ರೀತಿ ಮತಗಳಾಗಿ ಪರಿವರ್ತನೆಯಾಗಲ್ಲ:

ಪ್ರತಿ ಚುನಾವಣೆ ಬಂದಾಗಲೂ ಜನ ನನ್ನನ್ನು ನೋಡಲು ಮುಗಿಬೀಳುತ್ತೀರಿ. ಆದರೆ, ಈ ಪ್ರೀತಿ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಸಬೇಕು. ಸ್ಥಳೀಯ ಸರ್ಕಾರಗಳನ್ನು ಆರಿಸಿ ತನ್ನಿ. ಮುಂದಿನ ಚುನಾವಣೆಗಳಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಂತೆ ಕರೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆ.ಆರ್.ಪೇಟೆ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನ ಕೋಡಿಮಾರನಹಳ್ಳಿ, ಕಿಕ್ಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರು ಸಾಗಿದ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾದು ನಿಂತು ಜಯಘೋಷಗಳನ್ನು ಕೂಗಿ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ರಾಜ್ಯ ಆರ್ ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ರಾಜ್ಯ ಹಣಕಾಸು ಮತ್ತು ಮೂಲಭೌತ ಸೌಕರ್ಯ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ತಾಪಂ ಮಾಜಿ ಸದಸ್ಯ ಕೆ.ಆರ್.ರವೀಂದ್ರಬಾಬು, ಮುಖಂಡರಾದ ಗಂಜಿಗೆರೆ ಮಹೇಶ್ ಸೇರಿದಂತೆ ಹಲವರಿದ್ದರು.