ಬೆಂಗಳೂರು: ಕುಡಿಯೋ ನೀರಲ್ಲ, ಆದರೂ ಕುಣಿಯೋಕೆ ನೀರು!

| Published : Mar 26 2024, 01:49 AM IST / Updated: Mar 26 2024, 01:23 PM IST

ಸಾರಾಂಶ

ಬಣ್ಣಗಳ ಹಬ್ಬ ಹೋಳಿಯನ್ನು ನಗರದಲ್ಲಿ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು. ಮಕ್ಕಳು, ಯುವಕ-ಯುವತಿಯರು ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಣ್ಣಗಳ ಹಬ್ಬ ಹೋಳಿಯನ್ನು ನಗರದಲ್ಲಿ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು. ಮಕ್ಕಳು, ಯುವಕ-ಯುವತಿಯರು ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ಕೊರತೆಯಾಗಿರುವ ಕಾರಣ ಹಬ್ಬದ ವೇಳೆ ನೀರನ್ನು ಮಿತವಾಗಿ ಬಳಸಬೇಕು ಎಂಬ ಜಲಮಂಡಳಿಯ ಮನವಿಗೆ ಕೆಲವೆಡೆ ಮಾತ್ರ ಸ್ಪಂದನೆ ದೊರಕಿದೆ. 

ಬಹುತೇಕ ಕಡೆಗಳಲ್ಲಿ ಎಂದಿನಂತೆ ಯಥೇಚ್ಚವಾಗಿ ನೀರನ್ನು ಬಳಸಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು. ಕೆಲವು ಪ್ರದೇಶಗಳಲ್ಲಿ ಖಾಸಗಿಯಾಗಿ ಬಣ್ಣದೋಕುಳಿ ಜೊತೆಗೆ ರೇನ್ ಡ್ಯಾನ್ಸ್‌, ಪೂಲ್ ಡ್ಯಾನ್ಸ್ ಕೂಡ ಜರುಗಿದವು. ಯುವ ಜನತೆ ಸಂಭ್ರಮದೊಂದಿಗೆ ಕುಣಿದ ಕುಪ್ಪಳಿಸಿ ಹಬ್ಬವನ್ನು ಆಚರಿಸಿದರು.

ಮಕ್ಕಳಂತೂ ಸ್ನೇಹಿತರಿಗೆ ಬಣ್ಣ ಎರಚುತ್ತಾ, ಬಣ್ಣದ ನೀರು ತುಂಬಿದ ಬಲೂನುಗಳನ್ನು ತೂರಿ ಖುಷಿ ಪಟ್ಟರು. ಕಚೇರಿ, ಕಂಪನಿ, ಕೈಗಾರಿಕೆ ಸೇರಿ ಎಲ್ಲಾ ಕಡೆಗಳಲ್ಲಿ ಹಬ್ಬದ ಸಡಗರವಿತ್ತು. 

ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳಿಗೆ ಬಣ್ಣ ಹಚ್ಚಿ, ಸಿಹಿ ತಿನಿಸುಗಳು, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಬಣ್ಣದ ಪುಡಿಯಲ್ಲಷ್ಟೇ ಹಬ್ಬ:

ನಗರದ ಅರಮನೆ ಮೈದಾನದ ಬಳಿ ಆಯೋಜಿಸಿದ್ದ ಜಯಮಹಲ್ ಹೋಲಿ ಕಾರ್ಯಕ್ರಮದಲ್ಲಿ ಪ್ರತಿ ಬಾರಿ ರೈನ್ ಡ್ಯಾನ್ಸ್ ಇರುತ್ತಿತ್ತು. ಆದರೆ, ಈ ಬಾರಿ ಜಲಮಂಡಳಿಯಿಂದಲೇ ಎಚ್ಚರಿಕೆ ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಕೇವಲ ಬಣ್ಣದ ಪುಡಿ ಬಳಸಿ ಹಬ್ಬವನ್ನು ಆಚರಿಸಲಾಯಿತು.

ನೂರಾರು ಯುವ ಜನತೆ ಗುಂಪು ಸೇರಿ ಕೇವಲ ಪುಡಿ ಬಣ್ಣವನ್ನು ಪರಸ್ಪರ ಹಚ್ಚಿಕೊಂಡು ಡಿ.ಜೆ ಸಂಗೀತಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.ಮನವಿ ವಿರುದ್ಧ ರೈನ್‌ ಡ್ಯಾನ್ಸ್ ಆಯೋಜನೆ:

ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಸಮುಚ್ಛಯಗಳಲ್ಲಿ ಕೆಲವೆಡೆ ರೈನ್‌ ಡ್ಯಾನ್ಸ್‌ಗೆ ವ್ಯವಸ್ಥೆ ಮಾಡಿದ್ದು, ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

ಅಪಾರ್ಟ್‌ಮೆಂಟ್ ಹೆಸರು ಉಲ್ಲೇಖಿಸದೆ ವಿಡಿಯೋ ಪೋಸ್ಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ ಮೃತ್ಯುಂಜಯ, ಹಬ್ಬ ಆಚರಣೆ ಸಂತೋಷ ತರುತ್ತದೆ ನಿಜ. 

ಆದರೆ, ನೀರಿನ ಸಮಸ್ಯೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ವಿಡಿಯೋ ಸಹಿತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.