ಸಾರಾಂಶ
15 ವರ್ಷಗಳ ಹಿಂದೆ ಕೊಪ್ಪಳ ಹೇಗಿತ್ತು ಈಗಲೂ ಹಾಗೆ ಇದೆ. ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಕಳೆದ ಬಜೆಟ್‌ಟನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಎಲ್ಲಿ ಹೋಯಿತು? ಹೇಗೆ ಖರ್ಚಾಯಿತು? ಖರ್ಚಾಗಿದ್ದರೆ ಅಭಿವೃದ್ಧಿ ಏಕೆ ಕಣ್ಣಿಗೆ ಕಾಣುತ್ತಿಲ್ಲ? ಎಂದು ಕ್ಷೇತ್ರದ ಜನರು ಕೇಳುತ್ತಿದ್ದಾರೆ.
ಕೊಪ್ಪಳ:
ಮಾರ್ಚ್ 7ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಯೋಜನೆಗಳು ಲಭಿಸುವ ನಿರೀಕ್ಷೆ ಇಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 15 ವರ್ಷಗಳ ಹಿಂದೆ ಕೊಪ್ಪಳ ಹೇಗಿತ್ತು ಈಗಲೂ ಹಾಗೆ ಇದೆ. ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಕಳೆದ ಬಜೆಟ್‌ಟನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಎಲ್ಲಿ ಹೋಯಿತು? ಹೇಗೆ ಖರ್ಚಾಯಿತು? ಖರ್ಚಾಗಿದ್ದರೆ ಅಭಿವೃದ್ಧಿ ಏಕೆ ಕಣ್ಣಿಗೆ ಕಾಣುತ್ತಿಲ್ಲ? ಎಂದು ಕ್ಷೇತ್ರದ ಜನರು ಕೇಳುತ್ತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಿ ಎಂದು ಕೇಳುವ ಜನರ ಮೇಲೆ ಪ್ರಕರಣ ದಾಖಲಿಸುವ ವ್ಯವಸ್ಥೆಯಿಂದ ಏನನ್ನು ನಿರೀಕ್ಷಿಸಬಹುದು? ಹೊಸ ಯೋಜನೆ ಬಿಟ್ಟುಬಿಡಿ. ಕೊಡುವ ಅನುದಾನವನ್ನಾದರೂ ಸದ್ಬಳಕೆ ಮಾಡಿಕೊಂಡು ಜನರ ಸಂಕಷ್ಟ ಬಗೆಹರಿಸಲಿ. ಯಲಬುರ್ಗಾ ಕ್ಷೇತ್ರ ತ್ವರಿತಗತಿ ಅಭಿವೃದ್ಧಿ ಹೊಂದುತ್ತಿದ್ದರೆ ಕೊಪ್ಪಳ ಕ್ಷೇತ್ರ ಹಿಂದೆ ಸಾಗುತ್ತಿದೆ. ಇದು ಏಕೆ ಎಂಬುದನ್ನು ಅಧಿಕಾರದಲ್ಲಿದ್ದವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಒಬ್ಬರು ಮಂತ್ರಿಯಾಗಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾಗಿದ್ದಾರೆ. ಜಿಲ್ಲೆಯ ಸಂಸದರು ಕಾಂಗ್ರೆಸ್‌ನವರು. ಆದರೂ ಏಕೆ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿಲ್ಲ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಅನುದಾನ ನೀಡಿ ಕೊಪ್ಪಳವನ್ನು ನಿರ್ಲಕ್ಷಿಸುವ ಕಾರ್ಯ ಮುಂದುವರಿಯುವುದು ಈ ಬಾರಿಯೂ ಶತಸಿದ್ಧ. ಈ ಜಡತ್ವದ ವಿರುದ್ಧ ಜನರು ಹೋರಾಡಬೇಕಿದೆ ಎಂದು ಕರೆ ನೀಡಿದ್ದಾರೆ.