ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿಲ್ಲ: ಆರೋಪ

| Published : Jul 17 2025, 12:30 AM IST

ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿಲ್ಲ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿಲ್ಲ.

ಶಕ್ತಿ ಯೋಜನೆ ಸಂಭ್ರಮದಲ್ಲಿ ಶಾಸಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಾಕ್ಸಮರ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿಲ್ಲ ಎಂದು ಶಾಸಕ ಕೆ.ನೇಮರಾಜನಾಯ್ಕ ಆರೋಪಿಸಿದರು.ಶಕ್ತಿ ಯೋಜನೆಯಡಿ ೫೦೦ ಕೋಟಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಹೊಂದಿದ ಹಿನ್ನೆಲೆ ಪಟ್ಟಣದ ಬಸ್‌ಡಿಪೋದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ, ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

೨೦೧೨ರಲ್ಲಿ ನಾನು ಶಾಸಕನಾಗಿದ್ದಾಗ ಇರುವ ಬಸ್‌ಗಳೇ ಡಿಪೋದಲ್ಲಿ ಇನ್ನೂ ಇವೆ. ಹೊಸ ಬಸ್‌ಗಳ ಸೌಲಭ್ಯವನ್ನು ಸಾರ್ವಜನಿಕರಿಗೆ ಸರ್ಕಾರ ನೀಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೂ ಕೂಡ ರಸ್ತೆ ಅಭಿವೃದ್ಧಿಗೆ ಬಿಡಿಗಾಸು ಅನುದಾನ ನೀಡಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.ಶಾಸಕರ ಮಾತಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಪ್ರತಿಕ್ರಿಯಿಸಿ, ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಬಾರದು. ಗ್ಯಾರಂಟಿ ಯೋಜನೆಗಳು ಕ್ಷೇತ್ರಕ್ಕೆ ಬೇಡವೆಂದು ಪತ್ರ ಬರೆಯಲಿ. ಕ್ಷೇತ್ರಕ್ಕೆ ಯಾವುದೇ ಅನುದಾನವಿಲ್ಲವೆಂದು ಶಾಸಕರು ಶ್ವೇತ ಪತ್ರ ಹೊರಡಿಸಲಿ. ರಸ್ತೆ ಅಭಿವೃದ್ಧಿಗೆ ಹಣ ನೀಡಿಲ್ಲವೆಂದು ಹೇಳುತ್ತಿರುವ ಶಾಸಕರು, ಇತ್ತೀಚೆಗೆ ತಮ್ಮ ಮನೆಯ ಮುಂದಿನ ರಸ್ತೆಯನ್ನು ಅಭಿವೃದ್ಧಿಗೊಳಿಸಿದ್ದು ಯಾವ ಅನುದಾನದಲ್ಲಿ ಎಂದು ತಿರುಗೇಟು ನೀಡಿದರು.

ಕಳೆದ ೨ ವರ್ಷಗಳಲ್ಲಿ ಹಬೊಹಳ್ಳಿ ಬಸ್ ಘಟಕಕ್ಕೆ ೨೦ಕ್ಕೂ ಹೆಚ್ಚು ಬಸ್ ಒದಗಿಸಲಾಗಿದೆ. ಇದರ ಬಗ್ಗೆ ಶಾಸಕರಿಗೆ ಮಾಹಿತಿ ಕೊರತೆ ಇದೆ ಎಂದು ಲೇವಡಿ ಮಾಡಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ್ ಮಾತನಾಡಿ, ತಾಲೂಕಿನಲ್ಲಿ ಮಾಸಿಕ ೫.೪೭ ಲಕ್ಷ ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯ ಹೊಂದಿದ್ದಾರೆ. ಯೋಜನೆಗಾಗಿ ತಾಲೂಕಿನಲ್ಲಿ ವಾರ್ಷಿಕ ₹೨.೭೧ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪತ್ತಿವೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಗೌರಜ್ಜನವರ ಗಿರೀಶ್ ಮಾತನಾಡಿದರು.ಈ ಸಂದರ್ಭ ಜಿಲ್ಲಾ ಅನುಷ್ಠಾನ ಪ್ರಾಧಿಕಾರ ಸದಸ್ಯರಾದ ಎಚ್.ಪರಶುರಾಮ, ಎಚ್.ಜಂದಿಸಾಹೇಬ್, ತಾಲೂಕು ಸಮಿತಿಯ ಎಸ್.ಎ. ಸಂತೋಷ್, ರಾಘವೇಂದ್ರ, ಮಾಲವಿ ಗಿರೀಶ್, ನಾಗಮ್ಮ ಗೋಣಿಬಸಪ್ಪ, ಸರ್ದಾರ್ ರಾಮಣ್ಣ, ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ಬಾಳಪ್ಪ, ಮುಖಂಡರಾದ ಬಾಲಕೃಷ್ಣಬಾಬು, ಡಿಶ್ ಮಂಜುನಾಥ ಇದ್ದರು. ವ್ಯವಸ್ಥಾಪಕ ಜಡೇಶ್, ಸಂತೋಷ್ ಕುಮಾರ್, ರಾಘವೇಂದ್ರ ನಿರ್ವಹಿಸಿದರು. ಮಹಿಳಾ ನಿರ್ವಾಹಕರು ಸಮವಸ್ತ್ರ ಧರಿಸಿ ಗಮನಸೆಳೆದರು.