ಸಾರಾಂಶ
ಧಾರವಾಡ:
ದೇಶ ರಕ್ಷಿಸುವವರು ಸೈನಿಕರು, ದೇಶ ಕಟ್ಟುವವರು ಶಿಕ್ಷಕರು. ಆದರೆ, ದೇಶದ ಜನರೆಲ್ಲರನ್ನು ಸಂರಕ್ಷಿಸುವವರು ರೈತರು. ಸಂಕಷ್ಟಗಳನ್ನು ಸಮಚಿತ್ತದಿಂದ ಎದುರಿಸಿ ದೇಶಕ್ಕೆ ಅನ್ನ ನೀಡುವ ರೈತನನ್ನು ಮರೆತರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಹೇಳಿದರು.ಗುಬ್ಬಚ್ಚಿ ಗೂಡು ಶಾಲೆಯಲ್ಲಿ ಮಾಜಿ ಪ್ರಧಾನಿ ಚರಣ ಸಿಂಗ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿದ ಅವರು, ಮಕ್ಕಳಲ್ಲಿ ಕೃಷಿಯ ಬಗ್ಗೆ ಚಟುವಟಿಕೆ ಹಮ್ಮಿಕೊಂಡು ರೈತನ ಕೊಡುಗೆಯನ್ನು ಮಕ್ಕಳಿಗೆ ತಿಳಿಸುವುದು ಇಂದು ಅವಶ್ಯವಿದೆ. ಕೃಷಿ ಎಂದರೆ ಅಸಡ್ಯೆ ತೋರುತ್ತಿರುವ ಮಕ್ಕಳಿಗೆ ಅದರ ಮಹತ್ವ ಮತ್ತು ರೈತನ ಕಷ್ಟದ ಜೀವನವನ್ನು ತಿಳಿಸುತ್ತಾ ಶ್ರಮ ಸಂಸ್ಕೃತಿ ಪರಿಚಯಿಸಬೇಕು ಎಂದರು.ಜನಪದ ಕಲಾವಿದೆ ಸುನಂದಾ ನಿಂಬನಗೌಡರ, ರೈತ ಯಾವಾಗಲೂ ತಾನೊಬ್ಬನೇ ಬದುಕುವುದಿಲ್ಲ. ಎಲ್ಲ ಜೀವ ಸಂಕುಲ ಬದುಕಬೇಕು ಎನ್ನುತ್ತಾನೆ. ರೈತ ಎಂದೂ ಸ್ವಾರ್ಥಿಯಲ್ಲ. ಮಳೆ ಬರಬೇಕು ಭೂಮಿ ಸಮೃದ್ಧವಾಗಬೇಕು. ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ, ಶಾಲೆಯ ಅಂಗಳಕ್ಕೆ ಎತ್ತು ಮತ್ತು ರೈತರನ್ನು ಬರಮಾಡಿಕೊಂಡಿದ್ದಲ್ಲದೇ ಕೃಷಿ ಉಪಕರಣಗಳನ್ನೂ ತರಿಸಿ ಅವುಗಳನ್ನು ಪರಿಚಯಿಸುತ್ತಾ ಮಕ್ಕಳಲ್ಲಿ ಕೃಷಿಯ ಕುರಿತು ಮತ್ತು ರೈತನ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ತೋರಿಸಿದ್ದು ಅಭಿನಂದನೀಯ ಎಂದರು.ಎರಡು ಜೋಡಿ ಹೋರಿಗಳನ್ನು ಶಾಲೆಯ ಅಂಗಳಕ್ಕೆ ತಂದು ಅವುಗಳನ್ನು ಮಕ್ಕಳು ಮುಟ್ಟಿ ಸಂಭ್ರಮಿಸಿದ್ದು, ಅವುಗಳೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು. ಶಿಕ್ಷಕಿ ಲಕ್ಮ್ಮಿ ಜಾಧವ ಸ್ವಾಗತಿಸಿದರು. ಚಂದನಾ ದಿವುಟಗಿ, ಪ್ರಿಯಾಂಕಾ ಇಸ್ರಣ್ಣವರ ನಿರೂಪಿಸಿದರು. ಶಖಿನಾ ಹಂಚಿನಾಳ ಪ್ರಾರ್ಥಿಸಿದರು.