ಒಳ ಮೀಸಲಾತಿ ಜಾರಿ ಆಗುವ ತನಕ ಸರ್ಕಾರಿ ನೇಮಕಾತಿ ಬೇಡ

| Published : Aug 14 2024, 12:51 AM IST

ಸಾರಾಂಶ

ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಾಗುವ ತನಕ ಎಲ್ಲ ಸರ್ಕಾರಿ ನೇಮಕಾತಿಗಳಿಗೆ ತಡೆ ನೀಡಬೇಕೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಾಗುವ ತನಕ ಎಲ್ಲ ಸರ್ಕಾರಿ ನೇಮಕಾತಿಗಳಿಗೆ ತಡೆ ನೀಡಬೇಕೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಗುರುಪೀಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಒಳ ಮೀಸಲಾತಿಯ ಪರವಾಗಿ ಐತಿಹಾಸಿಕ ತೀರ್ಪು ಕೊಟ್ಟಿದೆ. ಒಳ ಮೀಸಲಾತಿಯ ಹೋರಾಟ ಮಾದಿಗ ಸಮಾಜದ್ದೇ ಆದರೂ ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಯ ಅನುಸಾರ ಸಾಮಾಜಿಕ ನ್ಯಾಯವನ್ನು ಒದಗಿಸಲಿದೆ. ಎಸ್ಟಿ ಸಮುದಾಯದವರಿಗೂ ಇದರ ಲಾಭ ಸಿಗಲಿದೆ ಎಂದರು.ಮಾದಿಗ ಸಮಾಜದ ಒಳ ಮೀಸಲಾತಿಯ ಹೋರಾಟಕ್ಕೆ ಮೂರು ದಶಕ ಮೀರಿದ ಇತಿಹಾಸ ಇದೆ. ಜನಾಂದೋಲನ, ಬೀದಿ ಹೋರಾಟ, ಕಾನೂನಾತ್ಮಕ ಸಂಘರ್ಷ, ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ತರಲಾಗಿತ್ತು. ಮಾದಾರ ಚೆನ್ನಯ್ಯ ಗುರುಪೀಠ ಮೂರೂ ಆಯಾಮದಲ್ಲಿ ತನ್ನ ಇತಿ-ಮಿತಿಯಲ್ಲಿ ಕೈ ಜೋಡಿಸಿ ಕೆಲಸ ಮಾಡಿದೆ. ಸಮಾವೇಶಗಳು, ಪಾದಯಾತ್ರೆ, ಧರಣಿಗಳನ್ನು ಶ್ರೀ ಮಠ ಸದಾ ಬೆಂಬಲಿಸಿದೆ.

ಮಾದಿಗ ದಂಡೋರದ ಎಮ್. ಶಂಕರಪ್ಪ, ತೆಲಂಗಾಣದ ಮಂದಕೃಷ್ಣ ಮಾದಿಗ, ಬಳ್ಳಾರಿ ಹನುಮಂತಪ್ಪ, ಮುತ್ತಣ್ಣ ಬೆನ್ನೂರು, ಪಾವಗಡ ಶ್ರೀರಾಂ ಸೇರಿದಂತೆ ಅನೇಕ ಪ್ರಮುಖ ಹೋರಾಟಗಾರರು ನಿರಂತರ ಮಠದ ಜೊತೆಗಿದ್ದಾರೆ. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇರಲಿ ಅಥವ ರಾಜ್ಯ ಕೇಂದ್ರ ಸರ್ಕಾರವಿರಲಿ ಶ್ರೀ ಮಠ ತನ್ನದೇ ಆದ ರೀತಿಯಲ್ಲಿ ಸಂಪರ್ಕ, ಸಂಬಂಧ ಇರಿಸಿಕೊಂಡು ಕಾರ್ಯಸಾಧನೆಯಲ್ಲಿ ತನ್ನ ಪಾತ್ರವಹಿಸಿದೆ ಎಂದರು. ಕೆಲವರು ಕೆನೆಪದರದ ವಿಷಯ ಮುಂದಿಟ್ಟು ದಿಕ್ಕು ತಪ್ಪಿಸುತ್ತಾ ಇದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಕೆನೆಪದರದ ವಿಷಯ ಸುಪ್ರೀಂ ಕೋರ್ಟಿನ ಅಬ್ಸರ್ವೇಷನ್ ಅಷ್ಟೆ. ಇದಕ್ಕೂ ಒಳಮೀಸಲಾತಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ಕೆನೆಪದರದ ಬಗ್ಗೆ ಸ್ಪಷ್ಟ ಪಡಿಸಿದ ತರುವಾಯ ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಪಸ್ವರ ಎತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲವೆಂದು ಶ್ರೀಗಳು ಹೇಳಿದರು.ಈವರೆಗೂ ಒಳಮೀಸಲಾತಿ ಕುರಿತಾದ ಸುಪ್ರೀಂಕೋರ್ಟಿನ ತೀರ್ಪನ್ನು ಹಿರಿಯ ದಲಿತ ನಾಯಕರಾದ ಖರ್ಗೆಯವರು ಸ್ವಾಗತಿಸಿಲ್ಲ. ಹೀಗಿರುವಾಗ ಖರ್ಗೆಯವರು ಕೆನೆಪದರದ ಬಗ್ಗೆ, ಅನಗತ್ಯ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಇದೆಲ್ಲವನ್ನು ಸರಿಯಾಗಿ ನಿರ್ವಹಿಸುವ ಬದ್ಧತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿದೆ ಎಂಬುದು ನಮ್ಮ ನಂಬಿಕೆ. ಸಂಪುಟ ಸಮಿತಿ, ಪರಿಶೀಲಿನಾ ಸಮಿತಿ, ಅಧ್ಯಯನ ಸಮಿತಿ ಇತ್ಯಾದಿ ರಚಿಸಿ ಕಾಲಹರಣ ಮಾಡದೇ ಮುಖ್ಯಮಂತ್ರಿಗಳು ತುರ್ತಾಗಿ ಒಳ ಮೀಸಲು ಜಾರಿಗೆ ಗಮನ ಹರಿಸಲಿ. ಅಲ್ಲಿಯವರೆಗೆ ಕೆಪಿಎಸ್ಸಿ ಸೇರಿದಂತೆ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ಮಾಡಬಾರದು ಎಂದು ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದರು.ಮಾದಿಗ ಮೀಸಲು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಳ್ಳಾರಿ ಹನುಮಂತಪ್ಪ ಮಾತನಾಡಿ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ದೇಶದ ಹಲವಾರು ರಾಜ್ಯಗಳು ಜಾರಿಗೆ ತರಲು ಮುಂದಾಗಿವೆ. ಸಾಮಾಜಿಕ ನ್ಯಾಯ, ಅಹಿಂದ ನಾಯಕ ಎಂದು ಎನ್ನಿಸಿಕೊಂಡಿರುವ ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಕೊಡಲೇ ಉಚ್ಚ ನ್ಯಾಯಾಲಯದ ಆದೇಶದಂತೆ ನಮ್ಮ ರಾಜ್ಯದಲ್ಲಿಯೂ ಸಹಾ ಒಳ ಮಿಸಲಾತಿಯನ್ನು ಜಾರಿ ಮಾಡುವಂತೆ ಆಗ್ರಹಿಸಿದರು.ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಂ, ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಬೆನ್ನೂರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮೋಹನ್, ಯೋಗೀಶ್, ಸಾಗರ್, ರವಿಮಲ್ಲಾಪುರ ಸೇರಿದಂತೆ ಇತರರು ಇದ್ದರು.