ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಎಸ್.ಎಸ್.ಎಲ್.ಸಿ.ಯ ಮರು ಪರೀಕ್ಷೆ 1 ಮತ್ತು 2ರಲ್ಲಿ ಹೆಚ್ಚುವರಿ ಅಂಕ (ಗ್ರೇಸ್ ಮಾರ್ಕ್) ಗಳನ್ನು ನೀಡುವುದಿಲ್ಲ ಎಂದು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 2 ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅವರಲ್ಲಿ ಫೇಲಾದವರೂ, ಫಲಿತಾಂಶ ಉತ್ತಮಪಡಿಸಿಕೊಳ್ಳಲೂ ಪರೀಕ್ಷೆ ಬರೆಯುವವರಿದ್ದಾರೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ವಾರ್ಷಿಕ ಪರೀಕ್ಷೆ ತುಂಬಾ ಕಟ್ಟುನಿಟ್ಟುಗೊಳಿಸಲಾಗಿತ್ತು, ಅದಕ್ಕೆ ಗ್ರೇಸ್ ಅಂಕ ನೀಡಲಾಗಿತ್ತು. ಆದರೇ ಮರು ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡುವುದಿಲ್ಲ ಎಂದರು.ವಾರ್ಷಿಕ ಪರೀಕ್ಷೆಯನ್ನು ತುಂಬಾ ಕಟ್ಟುನಿಟ್ಟುಗೊಳಿಸಿದ್ದರಿಂದ, ಪರೀಕ್ಷೆಯ ಪಾವಿತ್ರ್ಯತೆ ಉಳಿದು, ಉಡುಪಿ ಜಿಲ್ಲೆ ಮತ್ತೆ ಮೊದಲ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.3000 ಕೆಪಿಎಸ್ ಶಾಲೆ: ರಾಜ್ಯದ 3000 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೇಗೇರಿಸಲು ಸರ್ಕಾರ ನಿರ್ಧರಿಸಿದೆ. ಈ ಮೊದಲ ವರ್ಷ 500 ಶಾಲೆಗಳನ್ನು ಕೆ.ಪಿ.ಎಸ್. ಮಾಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3ರಿಂದ 6 ಶಾಲೆಗಳು ಮೇಲ್ದರ್ಜೆಗೇರಲಿವೆ ಎಂದು ಸಚಿವರು ಹೇಳಿದರು.ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್. ಫಂಡ್)ಗಳ ಮೂಲಕ ಈ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ನಿಧಿ ಸಂಗ್ರಹದ ನೇತೃತ್ವವನ್ನು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ವಹಿಸಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಸಿದ್ಧಾಂತ ಒಪ್ಪಿದವರಿಗೆ ಟಿಕೆಟ್: ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದ್ದು, ಅದು ಪಕ್ಷದ ತೀರ್ಮಾನ, ಅವರು ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಬಂದಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯವಾಗಿ ಸ್ಪರ್ಧಿಸುತ್ತಿರುವ ಎಸ್.ಪಿ. ದಿನೇಶ್ ಅವರಿಗೆ ಪಕ್ಷ ಹಿಂದೆ 2 ಬಾರಿ ಅವಕಾಶ ನೀಡಿತ್ತು, ಅವರು ಸೋತಿದ್ದರು, ಈ ಬಾರಿ ಗೆಲ್ಲಲೇಬೇಕು ಎಂದು ಪಕ್ಷದ ಹೈಕಮಾಂಡ್ ಟಿಕೆಟನ್ನು ಆಯನೂರು ಅವರಿಗೆ ನೀಡಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಆದ್ದರಿಂದ ಈ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ. ಮತಗಳು ಪಕ್ಷದ ಹೆಸರಿನಲ್ಲಿ ಬರುತ್ತವೆಯೇ ಹೊರತು ಅಭ್ಯರ್ಥಿಯ ಹೆಸರಿನಲ್ಲಿ ಅಲ್ಲ, ಆದ್ದರಿಂದ ದಿನೇಶ ಅವರ ಸ್ಪರ್ಧೆಯಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದವರು ಹೇಳಿದರು.
ದಿನೇಶ್ ಅವರು ಸ್ಪರ್ಧಿಸದಂತೆ ಮನವೊಲಿಸುವ ಪ್ರಯತ್ನ ನಡೆಸಲಾಗಿತ್ತು, ಅವರಿಗೆ ಪಕ್ಷ, ಸರ್ಕಾರದಲ್ಲಿ ಬೇರೆ ಒಳ್ಳೆಯ ಅವಕಾಶ ನೀಡುತ್ತೇವೆ ಎಂದು ಹೇಳಲಾಗಿತ್ತು. ಆದರೂ ಅವರು ಒಪ್ಪಲಿಲ್ಲ ಎಂದೂ ಮಧು ಬಂಗಾರಪ್ಪ ಹೇಳಿದರು.