ಎಸ್ಸೆಸ್ಸೆಲ್ಸಿ ಮರು ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ ಇಲ್ಲ: ಮಧು

| Published : May 21 2024, 12:35 AM IST

ಎಸ್ಸೆಸ್ಸೆಲ್ಸಿ ಮರು ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ ಇಲ್ಲ: ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆ-1 ಮತ್ತು 2ರಲ್ಲಿ ಹೆಚ್ಚುವರಿ ಅಂಕ (ಗ್ರೇಸ್ ಮಾರ್ಕ್ಸ್‌)ಗಳನ್ನು ನೀಡುವುದಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆ-1 ಮತ್ತು 2ರಲ್ಲಿ ಹೆಚ್ಚುವರಿ ಅಂಕ (ಗ್ರೇಸ್ ಮಾರ್ಕ್ಸ್‌)ಗಳನ್ನು ನೀಡುವುದಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 2 ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅವರಲ್ಲಿ ಫೇಲಾದವರು, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆಯುವವರಿದ್ದಾರೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ವಾರ್ಷಿಕ ಪರೀಕ್ಷೆಯನ್ನು ತುಂಬಾ ಕಟ್ಟುನಿಟ್ಟುಗೊಳಿಸಲಾಗಿತ್ತು, ಅದಕ್ಕಾಗಿ ಹೆಚ್ಚುವರಿ ಅಂಕ ನೀಡಲಾಗಿತ್ತು. ಆದರೆ, ಮರು ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡುವುದಿಲ್ಲ ಎಂದರು.

ಈ ಬಾರಿಯ ವಾರ್ಷಿಕ ಪರೀಕ್ಷೆಯನ್ನು ತುಂಬಾ ಕಟ್ಟುನಿಟ್ಟುಗೊಳಿಸಿದ್ದರಿಂದ, ಪರೀಕ್ಷೆಯ ಪಾವಿತ್ರ್ಯತೆ ಉಳಿದು, ಉಡುಪಿ ಜಿಲ್ಲೆ ಮತ್ತೆ ಮೊದಲ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.ರಾಜ್ಯದ 3,000 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ. ಈ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3ರಿಂದ 6 ಶಾಲೆಗಳು ಮೇಲ್ದರ್ಜೆಗೇರಲಿವೆ. ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್ ಫಂಡ್) ಮೂಲಕ ಈ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ನಿಧಿ ಸಂಗ್ರಹದ ನೇತೃತ್ವವನ್ನು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ವಹಿಸಿಕೊಂಡಿದ್ದಾರೆ ಎಂದರು.