ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ನೇತೃತ್ವದಲ್ಲಿ ಹಲವಾರು ಮಂದಿ ಕುರಿ, ಮತ್ತು ಎತ್ತುಗಳನ್ನು ತಾಲೂಕು ಕಚೇರಿ ಆವರಣದಲ್ಲಿ ತಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಂದಿರಾಗಾಂಧಿ ವಸತಿ ಶಾಲೆ ನಿರ್ಮಿಸಲು ಮಲ್ಲಾಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಗೋಮಾಳ ಜಮೀನನನ್ನು ಪಡೆದುಕೊಳ್ಳಬಾರದೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ನೇತೃತ್ವದಲ್ಲಿ ಹಲವಾರು ಮಂದಿ ಕುರಿ, ಮತ್ತು ಎತ್ತುಗಳನ್ನು ತಾಲೂಕು ಕಚೇರಿ ಆವರಣದಲ್ಲಿ ತಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಬಿ.ಎಸ್.ವಸಂತಕುಮಾರ್, ಮಲ್ಲಾಘಟ್ಟ ಕೆರೆಗೆ ಮತ್ತು ಅಲ್ಲಿರುವ ಶ್ರೀ ಗಂಗಾಧರೇಶ್ವರ ದೇವಾಲಯಕ್ಕೆ ತನ್ನದೇ ಆದ ಪುರಾತನ ಮತ್ತು ಐತಿಹಾಸಿಕ ಇತಿಹಾಸವಿದೆ. ದೇವಾಲಯದ ಸಮೀಪ ನಡೆಯುವ ಜಾತ್ರಾ ಮಹೋತ್ವವದಲ್ಲಿ ಜನರು, ಜಾನುವಾರುಗಳು ಸೇರುವ ಸ್ಥಳವಾಗಿದೆ. ಮಲ್ಲಾಘಟ್ಟದ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ಮೇಯಲು ತರುತ್ತಿದ್ದಾರೆ. ಅಲ್ಲದೇ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇರುವುದರಿಂದ ರೈತಾಪಿಗಳಿಗೆ ಅನುಕೂಲವಾಗಿದೆ. ಇಂತಹ ಉತ್ತಮ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ವಸಂತ ಕುಮಾರ್ ಕಿಡಿಕಾರಿದರು. ಪವಿತ್ರ ಮಲ್ಲಾಘಟ್ಟ ಕ್ಷೇತ್ರದಲ್ಲಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಭಕ್ತರ ಭಾವನೆಗೆ ಧಕ್ಕೆಯಾಗಲಿದೆ ಜೊತೆಗೆ ಸಾವಿರಾರು ರೈತರ ಜಾನುವಾರುಗಳ ಮೇವಿಗೂ ತೊಂದರೆಯಾಗಲಿದೆ ಎಂದರು. ಮಲ್ಲಾಘಟ್ಟ ಹಾಗೂ ಆನೆಕೆರೆ ಗ್ರಾಮಗಳಲ್ಲಿ ರೈತರು ಸಾವಿರಾರು ಜಾನುವಾರುಗಳನ್ನು ಸಾಕುತ್ತಿದ್ದಾರೆ. ವಸತಿ ಶಾಲೆ ನಿರ್ಮಿಸಿದರೆ ಮೇವಿಗೆ ತೊಂದರೆಯಾಗಲಿದೆ. ಆದ್ದರಿಂದ ವಸತಿ ಶಾಲೆಯ ನಿರ್ಮಾಣವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ವಸತಿ ಶಾಲೆಗಳನ್ನು ತಾಲೂಕಿಗೆ ಮಂಜೂರು ಮಾಡಿಸುವುದು ದೊಡ್ಡದಲ್ಲ. ಈಗ ತಾಲೂಕಿನಲ್ಲಿ ನಡೆಯುತ್ತಿರುವ ವಸತಿ ಶಾಲೆಯ ಸ್ಥಿತಿಗತಿಗಳನ್ನು ನೋಡಿದ್ದಿರಾ?. ಮೂಲಭೂತ ಸೌಲಭ್ಯ ಮರಿಚಿಕೆಯಾಗಿದೆ. ವಸತಿಶಾಲೆಯ ಮಕ್ಕಳು ಆಹಾರದ ವ್ಯತ್ಯಾಸದಿಂದ ಆಸ್ಪತ್ರೆ ಸೇರಿದ್ದಾಗ ಶಾಸಕರು ಮಕ್ಕಳತ್ತ ತಿರುಗಿ ನೋಡಲಿಲ್ಲ ಎಂದು ಮೂದಲಿಸಿದರು. ನಾವು ಇಂದಿರಾಗಾಂಧಿ ವಸತಿ ಶಾಲೆ ನಿರ್ಮಿಸಲು ವಿರೋಧಿಸುತ್ತಿಲ್ಲ. ಆದರೆ ರೈತರಿಗೆ ಜಾನುವಾರುಗಳಿಗೆ ಅನುಕೂಲವಾಗಿರುವ ಗೋಮಾಳ ಭೂಮಿಯಲ್ಲಿ ಮಾತ್ರ ಬೇಡ ಎಂಬುದು ನಮ್ಮ ನಿಲುವು ಎಂದರು.ಗೋಮಾಳ ಜಮೀನನ್ನು ವಸತಿ ಶಾಲೆಗೆ ನೀಡಬಾರದೆಂಬ ಕನಿಷ್ಠ ಜ್ಞಾನ ಕಂದಾಯ ಅಧಿಕಾರಿಗಳಿಗೆ ಇರಬೇಕು. ಸುಪ್ರೀಂ ಕೋರ್ಟ್ ಗೋಮಾಳವನ್ನು ಬಳಕೆ ಮಾಡುವ ಬಗ್ಗೆ ಸ್ಪಷ್ಟ ಆದೇಶ ನೀಡಿದೆ. ಆದಾಗ್ಯೂ ಸಹ ಧಿಕ್ಕರಿಸಿ ವಸತಿ ಶಾಲೆಗೆ ಭೂಮಿ ಮಂಜೂರು ಮಾಡಲಾಗಿದೆ. ಈ ಕುರಿತು ತಾವು ನ್ಯಾಯಾಲಯದ ಮೊರೆ ಹೋಗುವುದಾಗಿ ಬಿ.ಎಸ್.ವಸಂತ ಕುಮಾರ್ ತಿಳಿಸಿದರು. ಪ್ರತಿಭಟನೆಯ ನಂತರ ತಹಸೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಗವಿರಂಗಪ್ಪ, ಬಸವರಾಜು, ಕುಶಾಲ್, ಗೋಣಿತುಮಕೂರು ನಂದೀಶ್, ಗುರುರಾಜ್, ನಂಜುಂಡೇಗೌಡ, ರಂಗಸ್ವಾಮಿ, ಬಾಣಸಂದ್ರ ಹೊನ್ನೇಗೌಡ, ಶೇಖರ್, ಅಶೋಕ್, ಹನುಮಂತಯ್ಯ ಸೇರಿದಂತೆ ಮಲ್ಲಾಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.