ಸಾರಾಂಶ
ಹೊನ್ನಾವರ: ಹೊನ್ನಾವರ ತಾಲೂಕಿನ ಕರ್ಕಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಊರು ಪಾವಿನಕುರ್ವಾ. ಸುತ್ತಲೂ ಶರಾವತಿ ನೀರಿನಿಂದ ಹಾಗೂ ಅರಬ್ಬಿ ಸಮುದ್ರದಿಂದ ಸುತ್ತುವರಿದಿದೆ. ಸರಿ ಸುಮಾರು 25 ವರ್ಷಗಳ ಹಿಂದೆ ₹14 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಪಾವಿನಕುರ್ವಾ ಜನತೆಯ ಸಂಪರ್ಕವಾಗಿದ್ದ ತೂಗು ಸೇತುವೆ ಶಿಥಿಲಾವಸ್ಥೆಗೆ ಜಾರಿದೆ.
ಇಲ್ಲಿ ಸುಮಾರು 180 ಮನೆಗಳಿದ್ದು, 750 ಜನಸಂಖ್ಯೆ ಇದೆ. ಸೇತುವೆ ಕೆಟ್ಟಿರುವುದರಿಂದ ಇಲ್ಲಿನ ಜನತೆ ಆತಂಕಗೊಂಡಿದ್ದಾರೆ. ಬೇರೆ ದಾರಿಯಿಂದ ಪಾವಿನಕುರ್ವಾಕ್ಕೆ ಹೋಗಬೇಕು ಎಂದಾದಲ್ಲಿ ಹಳದೀಪುರ ಊರಿನ ಸಮೀಪದಲ್ಲಿರುವ ತಾರೀಬಾಗಿಲ ಬಳಿಯಿಂದ ಹೋಗಿ ಪಾವಿನಕುರ್ವಾ ತಲುಪಬಹುದು. ಆದರೆ ಸುತ್ತು ಬಳಸಿ ಬರಬೇಕು. ಕಳೆದ ಒಂದುವರೆ ವರ್ಷದಿಂದ ಈ ಸೇತುವೆ ದುರವಸ್ಥೆಗೆ ತಲುಪಿದ್ದು, ಸ್ಥಳೀಯ ಮುಖಂಡರನ್ನು ಹಾಗೂ ರಾಜಕೀಯ ನೇತಾರರನ್ನು ಸಂಪರ್ಕಿಸಲಾಗಿದೆ. ಆದರೂ ಯಾಕೋ ಈ ಸೇತುವೆಗೆ ಕಾಯಕಲ್ಪದ ಭಾಗ್ಯ ಇನ್ನೂ ದೊರಕಿಯೇ ಇಲ್ಲ.ಈ ಸೇತುವೆ ನಿರ್ಮಿಸುವಾಗ ಜನರ ಒಗ್ಗಟ್ಟು ಹಾಗೂ ಸಂಕಲ್ಪವಿದೆ. ತಮ್ಮ ಊರಿಗೆ ದೋಣಿಯ ಮೇಲೆ ಓಡಾಡುವುದನ್ನು ತಪ್ಪಿಸಿಕೊಳ್ಳಬೇಕು ಹಾಗೂ ನಾವು ಪಟ್ಟಣದ ವ್ಯಾಪ್ತಿಗೆ ಹತ್ತಿರವಾಗಬೇಕು ಅನ್ನುವ ಕಾರಣದಿಂದ ಊರಿನ ನಿವಾಸಿಗಳೇ ಅಂದು ದೇಣಿಗೆ ಸಂಗ್ರಹಿಸಿದ್ದರು. ಬಳಿಕ ಸರ್ಕಾರದ ₹14 ಲಕ್ಷ ಧನಸಹಾಯವೂ ಸಿಕ್ಕು ಈ ಸೇತುವೆ ನಿರ್ಮಾಣವಾಗಿತ್ತು.
ಈ ಸೇತುವೆ ಪುನರ್ ನಿರ್ಮಾಣದ ಬಗ್ಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಬಳಿ ಫೈಲ್ ಗಿರಕಿ ಹೊಡೆದು ಕೊನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವಿಜಯಪುರಕ್ಕೆ ಫೈಲ್ ಹೋದಾಗ ಸರ್ಕಾರದಲ್ಲಿ ಹಣ ಇಲ್ಲದಿರುವುದರಿಂದ ಕಾಮಗಾರಿ ತಡೆಹಿಡಿಯುವಂತೆ ಸೂಚಿಸಲಾಗಿದೆ.ಸೇತುವೆಗೆ ಬೇಕು ₹41 ಕೋಟಿ!: ಇನ್ನು ಇಲ್ಲಿ ಶಾಶ್ವತ ಸೇತುವೆಯ ನಿರ್ಮಾಣಕ್ಕೆ ಒಟ್ಟು ಅಂದಾಜು ₹ 41 ಕೋಟಿ ಬೇಕಾಗಲಿದೆ. ಪಾವಿನಕುರ್ವಾಗೆ ಸಂಪರ್ಕಿಸುವ ತೂಗು ಸೇತುವೆ ತನ್ನ ಗಟ್ಟಿತನ ಕಳೆದುಕೊಂಡಿದೆ. ನಡೆದಾಡಲು ಯೋಗ್ಯವಲ್ಲ. ಇದರ ಮೇಲೆ ಓಡಾಡುವುದನ್ನು ನಿಲ್ಲಿಸಬೇಕು ಎಂದು 2 ವರ್ಷದ ಹಿಂದೆಯೇ ಲೋಕೋಪಯೋಗಿ ಇಲಾಖೆ ವರದಿ ನೀಡಿತ್ತು.
ಇನ್ನು ಹೊನ್ನಾವರ ತಾಲೂಕು ಹೇಳಿ ಕೇಳಿ ಪ್ರವಾಸಿಗರ ಸ್ವರ್ಗ. ಇಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಂತೆಯೇ ಪಾವಿನಕುರ್ವಾದ ತೂಗುಸೇತುವೆ ನೋಡಲು ಪ್ರವಾಸಿಗರು ಬರುತ್ತಾರೆ. ಅವರು ಬಂದಾಗ ಸೇತುವೆಯ ಮೇಲೆ ಕುಣಿದಾಡುವುದು, ವಾಹನ ತೆಗೆದುಕೊಂಡು ಹೋಗುವುದು ಇತ್ಯಾದಿ ಕೆಲಸ ಮಾಡುತ್ತಾರೆ. ಈ ಸೇತುವೆ ಹಾಳಾಗಲು ಪ್ರವಾಸಿಗರು ಕಾರಣ ಎನ್ನುವ ವಾದವನ್ನು ಸ್ಥಳೀಯರು ಹೇಳುತ್ತಾರೆ.ನಮಗೆ ಸೇತುವೆ ಆಗಲೇಬೇಕು. ಶಾಸಕರು, ಸಚಿವರಿಗೆ ಭೇಟಿ ಮಾಡಿ ಈ ವಿಚಾರ ತಿಳಿಸಿದ್ದೇವೆ. ಪಂಚಾಯತ್ ಮೂಲಕ ಮಾಡಲು ಹಣಕಾಸಿನ ಕೊರತೆ ಇದೆ. ಸೇತುವೆ ನಿರ್ಮಾಣಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕರ್ಕಿ ಪಂಚಾಯತ್ ಅಧ್ಯಕ್ಷೆ ವೀಣಾ ಶೇಟ್ ಹೇಳಿದ್ದಾರೆ.
ರಾಜಕೀಯದಿಂದ ಅಭಿವೃದ್ಧಿ ಮರೀಚಿಕೆ ?ಇನ್ನು ಈ ವಿಚಾರವಾಗಿ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರಲು ಕಾರಣ ರಾಜಕೀಯದ ಮೇಲಾಟ. ಯಾಕೆಂದರೆ ಇದು ಕುಮಟಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇದು ಅಭಿವೃದ್ಧಿಗೆ ತೊಡಕನ್ನು ಉಂಟುಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.