ಯಾವ ಗ್ಯಾರಂಟಿಯನ್ನೂ ವಾಪಸ್ ಪಡೆಯುವುದಿಲ್ಲ

| Published : Aug 16 2024, 12:48 AM IST

ಸಾರಾಂಶ

ಯಾರು ಏನಾದರೂ ಹೇಳಲಿ ನಮ್ಮ ಕೇಂದ್ರದ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ್ದು, ಗ್ಯಾರಂಟಿ ಬಗ್ಗೆ ಯಾರೂ ಮಾತನಾಡಬಾರದು.

ಕನ್ನಡಪ್ರಭ ವಾರ್ತೆ ಹಾಸನ

ಯಾರು ಏನಾದರೂ ಹೇಳಲಿ ನಮ್ಮ ಕೇಂದ್ರದ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ್ದು, ಗ್ಯಾರಂಟಿ ಬಗ್ಗೆ ಯಾರೂ ಮಾತನಾಡಬಾರದು. ಯಾವ ಗ್ಯಾರಂಟಿ ವಾಪಸ್ ಪಡೆಯಲ್ಲ. ಎಲ್ಲಾ ಗ್ಯಾರಂಟಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಗ್ಯಾರಂಟಿ ವಿಚಾರ ಯಾರೂ ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ. ಏನಿದೆ ಯಥಾಸ್ಥಿತಿ ಮುಂದುವರಿಯುತ್ತದೆ. ಸತೀಶ್ ಜಾರಕಿಹೋಳಿ, ಮಹದೇವಪ್ಪ, ಮುನಿಯಪ್ಪ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಬಂದು ಎಲ್ಲಾ ಮಂತ್ರಿಗಳನ್ನು ಕರೆಸಿ ಸೂಚನೆ ಕೊಟ್ಟು ಹೋಗಿದ್ದಾರೆ. ಮಹದೇವಪ್ಪ, ಸತೀಶ್ ಜಾರಕಿಹೋಳಿ ಒಂದು ದಿನಕ್ಕೆ ವಾಪಸ್ ಬಂದಿದ್ದಾರೆ. ನಿತಿನ್ ಗಡ್ಕರಿ ಕರೆದಿದ್ದ ಮೀಟಿಂಗ್‌ಗೆ ಸತೀಶ್ ಜಾರಕಿಹೋಳಿ ಹೋಗಿದ್ದರು.

ಮಹದೇವಪ್ಪ ಪಿಡಬ್ಲೂಡಿ ಮಿನಿಸ್ಟರ್ ಆಗಿದ್ದವರು ಹಾಗಾಗಿ ಅವರು ಜೊತೆಯಲ್ಲಿ ಹೋಗಿದ್ದಾರೆ. ದೆಹಲಿ ಮುನಿಯಪ್ಪ ಅವರ ತವರು, ಸ್ವಂತ ಊರು. ಮಂತ್ರಿಯಾದ ಕ್ಷಣ ವೈಯುಕ್ತಿಕ ಅಭಿಪ್ರಾಯ ಹೇಳಬಾರದು ಅಂತ ಏನಿಲ್ಲ. ಯಾರು ಏನೇ ಹೇಳಿದ್ರೆ ಅದು ವೈಯುಕ್ತಿಕ ಅಭಿಪ್ರಾಯ. ಯಾವುದೇ ಕಾರಣಕ್ಕೆ ಗ್ಯಾರಂಟಿ ನಿಲ್ಲಿಸುವುದಿಲ್ಲ. ಸತೀಶ್ ಜಾರಕಿಹೊಳಿ ಸಭೆಯಲ್ಲಿ ಇದ್ದು, ಕೆ.ಸಿ.ವೇಣುಗೋಪಾಲ್, ಸುಜ್ರೇವಾಲ ಅವರು ಇಬ್ಬರು ಕೂಡ ಗ್ಯಾರಂಟಿ ವಿಷಯದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಹೇಳಿದ್ದಾರೆ. ಮೂರು ಡಿಸಿಎಂ ಮಾಡುವ ಹೈಕಮಾಂಡ್ ಗಮನಕ್ಕೆ ತಂದಿದ್ದೀವಿ. ಅವರು ಏನು ತೀರ್ಮಾನ ತೆಗೆದುಕೊಳ್ತಾರೆ ನೋಡೋಣ ಎಂದರು.

ಸಿದ್ದರಾಮಯ್ಯ ಅವರು ಪಕ್ಷದ ಪವರ್‌ಫುಲ್ ಲೀಡರ್. ಕಾಂಗ್ರೆಸ್ ವೀಕ್ ಮಾಡಿ ಸಿದ್ದರಾಮಯ್ಯ ಅವರನ್ನು ವೀಕ್ ಮಾಡಬೇಕು ಎನ್ನುವ ಹುನ್ನಾರ ವಿರೋಧ ಪಕ್ಷದವರದ್ದು. ಸೈಟ್ ತಗೊಂಡು ಹದಿನೈದು ವರ್ಷ ಆಗಿದೆ. ಅದೇ ನಿಯಮದಡಿ ಬೇರೆ ಪಾರ್ಟಿಯವರು ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹೆಸರಿಗೆ ಕಪ್ಪುಚುಕ್ಕೆ ತರಬೇಕು ಎನ್ನುವ ಉದ್ದೇಶ ಇದೆ. ಅವರು ಹೇಗೆ ರಾಜಕೀಯವಾಗಿ ಏನು ಮಾಡಲು ಹೊರಟಿದ್ದಾರೆ, ನಾವು ಅದನ್ನು ರಾಜಕೀಯವಾಗಿ ಎದುರಿಸುತ್ತೇವೆ. ಕುಮಾರಸ್ವಾಮಿ 550 ಜಂತಕಲ್‌ದು ಏಕೆ ಬಂತು ಆಚೆಗೆ? ಸುಮ್ಮನಿದ್ರೆ ಅದು ಸುಮ್ಮನೆ ಬಿದ್ದಿರೋದು. ರಾಜಕೀಯವಾಗಿ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.

ರಾಜಕೀಯದಲ್ಲಿ ಯಾರೂ ಸತ್ಯ ಹರಿಶ್ಚಂದ್ರನ ಮಕ್ಕಳಿಲ್ಲ. ಅದರಲ್ಲಿ ಗ್ರೇಡ್ ಇರುತ್ತದೆ. ಸುಮ್ಮನೆ ನಾನು ಸತ್ಯಹರಿಶ್ಚಂದ್ರ ಹೇಳ್ಕಂಡ್ರೆ ಆತ್ಮವಂಚನೆ ಮಾಡಿಕೊಂಡಂತೆ. ಪೂಜೆಗೆ ಹೋದಾಗ ಮಂಗಳಾರತಿ ಹಣ ಹಾಕಿ ಪುರೋಹಿತನ ಸೆಳೆದವರೆ ಅಂತ ಹೇಳಲು ಆಗುತ್ತಾ, ನಮ್ಮ ಭಕ್ತಿ ಅದು. ಯಾವೋನೋ ಬಂದು ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡ್ತಾನೆ. ನಾವು ಇಸ್ಕಳಲು ಆಗಲ್ಲ, ನಮಗೆ ಎಲೆಕ್ಷನ್‌ಗೆ ಖರ್ಚಿಗೆ ಬೇಕು. ಸತ್ಯ ಹೇಳಿದ್ರೆ ಸರಿ ಇರೋದಿಲ್ಲ. ಅದಕ್ಕೆ ನಾವು ಹೇಳೋದು, ನಮ್ಮದು ಏನಿಲ್ಲ. ನಾವು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು, ಸತ್ಯಹರಿಶ್ಚಂದ್ರ ನಮ್ ಮನೇಲಿ ಬಾಡಿಗೆ ಇದ್ದದ್ದು ಅಂತ ಹೇಳಿಕೊಳ್ಳೋರು ಬಹಳ ಜನ ರಾಜಕಾರಣಿಗಳು ಇದ್ದಾರೆ. ನಾವು ಬೇಡ ಅನ್ನಲು ಆಗುತ್ತಾ ಎಂದು ಹೇಳಿದರು.

ಹೆಚ್ಚಿನ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಇನ್ನೂ ಕೂಡ ಮಳೆ ಆಗೋ ಸೂಚನೆ ಇದೆ. ಹಾಗಾಗಿ ಮಳೆ ಮುಗಿದ ಬಳಿಕ ಮತ್ತೆ ರಸ್ತೆಗಳನ್ನು ಸುಸ್ಥಿತಿಗೆ ತರುತ್ತೇವೆ. ಈ ವರ್ಷ ಮಳೆಯಿಂದ ಆಗಿರುವ ಹಾನಿ ಬಗ್ಗೆ ವರದಿ ಪಡೆಯುತ್ತೇವೆ. ಯಾವುದೇ ರೈತರಿಗೆ ಅನ್ಯಾಯ ಆಗದ ರೀತಿಯಲ್ಲಿ ನಮ್ಮ ಸರ್ಕಾರ ಮಾಡುತ್ತದೆ. ಎನ್‌ಡಿಆರ್‌ಎಫ್ ಪರಿಹಾರ ಮೊತ್ತ ಪರಿಷ್ಕರಣೆ ಆಗಬೇಕು ಎನ್ನೋ ಬೇಡಿಕೆ ಇದೆ. ಈ ಬಗ್ಗೆ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಕೂಡ ಬರೆಯಲಾಗಿದೆ ಎಂದರು.

ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.