ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರತಿ ವರ್ಷ ಜೂನ್ ಅಂತ್ಯದೊಳಗೆ ಹೇಮಾವತಿ ನೀರನ್ನು ಕೆರೆಗೆ ಹರಿಸುತ್ತಿದ್ದರು. ಆಗಸ್ಟ್ ಮೊದಲ ವಾರವಾದರೂ ನೀರನ್ನು ಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದ್ದು, ಕೂಡಲೇ ಸರ್ಕಾರ ಎಚ್ಚೆತ್ತು ಜಿಲ್ಲೆಗೆ ಹೇಮೆ ನೀರು ಹರಿಸಬೇಕು. ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಈ ಬಾರಿ ಮಳೆಯ ಅಭಾವ ಉಂಟಾಗಿದ್ದು ಹೇಮೆ ನೀರು ತಡ ಮಾಡಿರುವುದರಿಂದ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆಯಲ್ಲಿ ನಿರತರಾಗಿದ್ದು ಜಿಲ್ಲೆಯ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರ ಹಿತ ಕಾಯಬೇಕು ಹಾಗೂ ಕೂಡಲೇ ಹೇಮಾವತಿ ನೀರನ್ನು ಹರಿಸಬೇಕು. ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದೆ ಹೋದಲ್ಲಿ ಜಿಲ್ಲಾ ಮತ್ತು ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಂಚಾಕ್ಷರಿ, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಣ್ಣ ಮಾತನಾಡಿ ಈ ವರ್ಷ ಬರದ ಛಾಯೆ ಆವರಿಸಿರುವುದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ಜನ ಜಾನುವಾರುಗಳಿಗೂ ಇದರ ಬಿಸಿ ತಟ್ಟಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಜಿಲ್ಲಾ ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಕಳೆದ ಬಾರಿ ಅಧಿಕಾರಿಗಳ ನಿರ್ಲಕ್ಷ ಮತ್ತು ಗುಬ್ಬಿ ಶಾಸಕ ಬೇಜವಾಬ್ದಾರಿ ತನದಿಂದ ಗುಬ್ಬಿ ತಾಲೂಕಿನ ಹಲವು ಕೆರೆಗಳು ಹೇಮಾವತಿ ನೀರಿನಿಂದ ತುಂಬಿರಲಿಲ್ಲ. ಆದರೆ ಈ ಬಾರಿ ಬರಗಾಲ ಎದುರಾಗಿದ್ದು ಕೆರೆಕಟ್ಟೆಗಳು ಬತ್ತಿ ಹೋಗಿ ಸಂಕಷ್ಟ ಎದುರಾಗಿದೆ. ಈ ಕೂಡಲೇ ಅಧಿಕಾರಿಗಳು ಮತ್ತು ಶಾಸಕರು ಸಲಹಾ ಸಮಿತಿಯ ಜೊತೆ ಚರ್ಚಿಸಿ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಡಿಸಿಎಂ ಜಿ.ಪರಮೇಶ್ವರ್ ಕೇವಲ ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸೀಮಿತವಾಗಿದ್ದು ನಮ್ಮ ಜಿಲ್ಲೆಯ ರೈತರ ಪರ ನಿಂತು ಕೆರೆಗಳನ್ನು ತುಂಬಿಸುವ ಕೆಲಸದಲ್ಲಿ ವಿಫಲರಾಗಿದ್ದಾರೆ. ಈ ಬಾರಿ ನಮ್ಮ ನೀರು ಹರಿಸದಿದ್ದರೆ ಉಗ್ರ ಹೋರಾಟವನ್ನು ಬಿಜೆಪಿ ರೈತರೊಟ್ಟಿಗೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಾಗರನಹಳ್ಳಿ ನಂಜೇಗೌಡ, ಜಿ.ಆರ್.ಶಿವಕುಮಾರ್, ಅಣ್ಣಪ್ಪಸ್ವಾಮಿ ಬಸವರಾಜು, ಬಿಕ್ಕೆಗುಡ್ಡ ವಿದ್ಯಾಸಾಗರ್, ಅರಿವೇಸಂದ್ರ ಲೋಕೇಶ್, ತಿರುಮಲೇಶ್, ನಂದಿಕೋಲ್ ರವಿ, ಚನ್ನಶೆಟ್ಟಿಹಳ್ಳಿ ಯತೀಶ್, ಗಂಗಣ್ಣ, ಸೇರಿದಂತೆ ಇತರರು ಹಾಜರಿದ್ದರು.