ಹಬ್ಬಕ್ಕೆ ರಜೆ ಇಲ್ಲ; ನಿಯೋಜಿತ ಸಿಬ್ಬಂದಿ ತಪ್ಪದೇ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಿ; ಡಿಸಿ ಸೂಚನೆ

| Published : Sep 27 2025, 12:00 AM IST

ಹಬ್ಬಕ್ಕೆ ರಜೆ ಇಲ್ಲ; ನಿಯೋಜಿತ ಸಿಬ್ಬಂದಿ ತಪ್ಪದೇ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಿ; ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆ-ಹೊರೆಯ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯು ಸಮೀಕ್ಷಾ ಕಾರ್ಯದಲ್ಲಿ ಹಿಂದುಳಿದಿದೆ

ಬಳ್ಳಾರಿ: ಹಿಂದುಳಿದ ವರ್ಗಗಳ ಸಮೀಕ್ಷಾ ಕಾರ್ಯ ಮುಗಿಯುವವರೆಗೆ ಸಮೀಕ್ಷಾದಾರರಿಗೆ ದಸರಾ ಹಬ್ಬ ಸೇರಿದಂತೆ ಯಾವುದೇ ರೀತಿಯ ರಜೆ ನೀಡುವುದಿಲ್ಲ. ನಿಯೋಜಿತ ಸಿಬ್ಬಂದಿ ಪ್ರತಿಯೊಬ್ಬರೂ ತಪ್ಪದೇ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡೀಯೋ ಸಭಾಂಗಣದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ನೆರೆ-ಹೊರೆಯ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯು ಸಮೀಕ್ಷಾ ಕಾರ್ಯದಲ್ಲಿ ಹಿಂದುಳಿದಿದೆ. ಹಾಗಾಗಿ ಸಮೀಕ್ಷಾ ಕಾರ್ಯಕ್ಕೆ ಕಾಲಾವಕಾಶ ಕಡಿಮೆ ಇದ್ದು, ಎಲ್ಲ ಸಮೀಕ್ಷಾದಾರರು ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಸಮೀಕ್ಷೆಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಕ್ಷಮತೆ ತೋರಿಸಬೇಕು. ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ನೇಮಿಸಿದ ಬಹಳಷ್ಟು ಗಣತಿದಾರರು (ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು) ಕ್ಷೇತ್ರಮಟ್ಟದಲ್ಲಿ ಹೋಗಿ ಮೊಬೈಲ್ ಮೂಲಕ ಲಾಗಿನ್ ಆಗದೇ ಇರುವುದು, ಸಮೀಕ್ಷೆಗೆ ತೆರಳದೇ ಇರುವುದು ಕಂಡುಬಂದಿದೆ. ಕೂಡಲೇ ಅವರನ್ನು ಸಂಪರ್ಕಿಸಿ, ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಅಂತಹವರ ಮೇಲೆ ಕ್ರಮ ಜರುಗಿಸಬೇಕು ಎಂದು ಎಲ್ಲ ತಾಲೂಕು ತಹಶೀಲ್ದಾರರಿಗೆ ಸೂಚಿಸಿದರು.

ಹಳ್ಳಿಗಳಲ್ಲಿ ಲಾಗಿನ್ ಗೆ ನೆಟ್ವರ್ಕ್ ಸಮಸ್ಯೆ ಕಂಡುಬರುವ ಹಳ್ಳಿಗಳನ್ನು ಗುರುತಿಸಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಲಾಗುತ್ತದೆ. ಇದಕ್ಕೆ ಬೇಕಾದ ಸಿಬ್ಬಂದಿ, ಸಾಮಗ್ರಿಗಳನ್ನು ಒದಗಿಸಿಕೊಡಲಾಗುವುದು. ಕುಟುಂಬಸ್ಥರು ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ನೋಂದಾಯಿಸಿಕೊಳ್ಳಲು ಅನುಕೂಲವಾಗಲಿದೆ. ಶಿಬಿರ ಆಯೋಜನೆ ಮಾಹಿತಿಯನ್ನು ಆಯಾ ಗ್ರಾಮಸ್ಥರಿಗೆ ತಿಳಿಸಬೇಕು. ಸಮೀಕ್ಷಾ ಕಾರ್ಯಕ್ಕೆ ತೆರಳುವ ಗಣತಿದಾರರು ಮೊಬೈಲ್ ಲಾಗಿನ್ ಆಗುವ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡುಬಂದಲ್ಲಿ ಕೂಡಲೇ ಮೇಲ್ವಿಚಾರಕರ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಟೌನ್ ಶಿಪ್, ವಡ್ಡು, ಶಂಕರ ಗುಡ್ಡ ಕಾಲೋನಿಗಳಲ್ಲಿ ಸಮೀಕ್ಷಾದಾರರಿಗೆ ಪ್ರವೇಶ ನೀಡದಿರುವುದರ ಕುರಿತು ಕಂಪನಿಯ ಮುಖ್ಯಸ್ಥರಿಗೆ ಆದೇಶ ರವಾನಿಸಿ ಎಂದು ಸಂಡೂರು ತಹಶೀಲ್ದಾರರಿಗೆ ಸೂಚಿಸಿದರು.

ಪ್ರತಿದಿನ ಬಿಇಒಗಳು ಸೂಪರ್ ವೈಸರ್ ಗಳ ಮೇಲ್ವಿಚಾರಣೆ ನಡೆಸಬೇಕು. ಪ್ರತಿಯೊಬ್ಬರ ಸಹಕಾರ-ಸಹಭಾಗಿತ್ವದಿಂದ ಜಿಲ್ಲೆಯನ್ನು ಟಾಪ್-5 ಜಿಲ್ಲೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಿಸುವ ಮೂಲಕ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಎಡಿಸಿ ಮಹಮ್ಮದ್ ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಎಂಎಫ್ ವಿಶೇಷ ಅಧಿಕಾರಿ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಎಲ್ಲ ತಾಲೂಕು ತಹಶೀಲ್ದಾರರು, ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸಿಡಿಪಿಒಗಳು ಸಭೆಯಲ್ಲಿ ಇದ್ದರು.