ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ ಬೇಡ: ವಿಶ್ವ ಹಿಂದೂ ಪರಿಷತ್, ಭಜರಂಗದಳ

| Published : Apr 02 2024, 01:04 AM IST

ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ ಬೇಡ: ವಿಶ್ವ ಹಿಂದೂ ಪರಿಷತ್, ಭಜರಂಗದಳ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ರಥೋತ್ಸವದ ಮುಂದೆ ಕುರಾನ್ ಪಠಿಸಲು ಅವಕಾಶ ನೀಡದಿರುವುದು ಸ್ವಾಗತಾರ್ಹವಾಗಿದೆ. ಆದರೂ ಕಾಜಿಯವರಿಂದ ದೇವಾಲಯದ ಮೆಟ್ಟಲುಗಳ ಮೇಲೆ ಪ್ರಾರ್ಥನೆ ಸಲ್ಲಿಸಿರುವುದಕ್ಕೆ (ಅರೆಬಿಕ್ ಭಾಷೆಯಲ್ಲಿ) ಕೂಡ ಯಾವ ಆಧಾರವೂ ಇರುವುದಿಲ್ಲ .

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕು ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಶ್ರೀ ಚನ್ನಕೇಶವ ಜಾತ್ರಾ ದಿವ್ಯ ರಥೋತ್ಸವದಂದು ಕುರಾನ್ ಪಠಣ ಬೇಡ ಎಂದು ತಹಸೀಲ್ದಾರ್ ಎಂ. ಮಮತಾರವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಭಜರಂಗದಳ ತಾಲೂಕು ಕಾರ್ಯದರ್ಶಿ ನಾಗೇಶ್ ಗುಂಡ, ಪಟ್ಟಣದ ಶ್ರೀ ಚನ್ನಕೇಶವ ದಿವ್ಯ ರಥೋತ್ಸವದಂದು ಹಿಂದೂ ಸಂಪ್ರದಾಯದಂತೆ ಮಾತ್ರ ಪೂಜಾ ವಿಧಿ, ವಿಧಾನಗಳು ನಡೆಯಲಿ, ಆದರೆ ಅಲ್ಲಿ ಯಾವುದೇ ಕಾರಣಕ್ಕೂ ಕುರಾನ್ ಪಠಣ ಮಾಡುವುದು ಬೇಡ.

ಕಳೆದ ವರ್ಷವೂ ಕೂಡ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಜರಾಯಿ ಕಮಿಷನರ್ ಆದೇಶದಂತೆ ಆಗಮಿಕರು ಬೇಲೂರಿಗೆ ಆಗಮಿಸಿ, ಸಂಪೂರ್ಣ ವಿಮರ್ಶೆ ಮಾಡಿ, ಕುರಾನ್ ಪಠಿಸಲು ಯಾವ ಆಧಾರವೂ ಇಲ್ಲ, ಕೇವಲ ವಂದನೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ನೀಡಿರುತ್ತಾರೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಕಳೆದ ವರ್ಷ ರಥೋತ್ಸವದ ಮುಂದೆ ಕುರಾನ್ ಪಠಿಸಲು ಅವಕಾಶ ನೀಡದಿರುವುದು ಸ್ವಾಗತಾರ್ಹವಾಗಿದೆ. ಆದರೂ ಕಾಜಿಯವರಿಂದ ದೇವಾಲಯದ ಮೆಟ್ಟಲುಗಳ ಮೇಲೆ ಪ್ರಾರ್ಥನೆ ಸಲ್ಲಿಸಿರುವುದಕ್ಕೆ (ಅರೆಬಿಕ್ ಭಾಷೆಯಲ್ಲಿ) ಕೂಡ ಯಾವ ಆಧಾರವೂ ಇರುವುದಿಲ್ಲ ಎಂದು ತಿಳಿಸಿದರು.

ಬೇಲೂರಿಗೆ ಬರುವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಸಂದರ್ಭದಲ್ಲಿ ಇಲ್ಲ ಸಲ್ಲದ ಮುಸ್ಲಿಂ ಆಚರಣೆಗಳನ್ನು ಬಲವಂತವಾಗಿ ಹೇರುವುದು ಹಾಗೂ ಕಾಜಿಯವರಿಗೆ ವಿಶೇಷ ಸ್ಥಾನಮಾನ ನೀಡಿ ಮೆಟ್ಟಿಲು ಮೇಲೆ ಮುಜರೆ ಮರ್ಯಾದೆ/ವಂದನೆ ಅಥವಾ ಕುರಾನ್ ಪಠಣ ಸಲ್ಲಿಸಲು ಅವಕಾಶ ನೀಡಿರುವುದನ್ನು ವಿರೋಧಿಸುತ್ತೇವೆ. ಕಾಜಿಯವರು ಎಲ್ಲರಂತೆ ಜಾತ್ರಾ ಮಹೋತ್ಸವಕ್ಕೆ ಬಂದು ದೇವರಿಗೆ ಕೈಮುಗಿದು ಹೋಗಲು(ವಂದನೆ ಸಲ್ಲಿಕೆ) ಯಾವ ಅಭ್ಯಂತರವೂ ಇಲ್ಲ. ಅವರಿಗೆ ಮೆಟ್ಟಿಲು ಮೇಲೆ ವಿಶೇಷ ಅವಕಾಶ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಇದಕ್ಕೆಲ್ಲ ಮೂಲ ಆಧಾರವಾಗಿರುವ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಮ್ಯಾನ್ಯುಯಲ್ ತಿರಸ್ಕರಿಸಿ, ಪುನರ್ ರಚಿಸಬೇಕೆಂದು ಈ ಮೂಲಕ ತಹಸೀಲ್ದಾರ್ ಎಂ. ಮಮತಾರವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಒಂದು ವೇಳೆ ಶ್ರೀ ಚನ್ನಕೇಶವ ದೇವಾಲಯದ ದಿವ್ಯ ರಥೋತ್ಸವದಂದು ಕುರಾನ್ ಪಠಣ ನಿಲ್ಲಿಸದಿದ್ದರೆ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ಕೊಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ತಾಲೂಕು ಕಾರ್ಯದರ್ಶಿ ನಾಗೇಶ್ ಗುಂಡ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ತಾಲೂಕು ಸಂಯೋಜಕ ಭರತ್, ಅರುಣ್ ಸಿಂಗ್ ರಜಪೂತ, ಮೋಹನ್, ಸಂಜಯ್, ಹೇಮಂತ್, ಪವನ್ ಮತ್ತು ಹಿಂದೂ ಕಾರ್ಯಕರ್ತರು ಹಾಜರಿದ್ದರು.