ಸಾರಾಂಶ
ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅಂಕ ಗಳಿಸಿದ ಕಲ್ಮಂಜ ಪ್ರೌಢಶಾಲೆಯ ತನುಶ್ರೀ , ಕಾಯರ್ತಡ್ಕ ಪ್ರೌಢಶಾಲೆಯ ಮೇಘನಾ ಹಾಗು ಮಚ್ಚಿನ ಪ್ರೌಢಶಾಲೆಯ ಮೊಹಮ್ಮದ್ ಜಿಯಾದ್ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇಸ್ರೋದಲ್ಲಿ ಕನ್ನಡ ನಾಡಿನ ಅನೇಕ ವಿಜ್ಞಾನಿಗಳಿದ್ದಾರೆ. ಅವರೆಲ್ಲರನ್ನೂ ನಾಡಿನ ಪತ್ರಿಕೆಗಳು ಪರಿಚಯಿಸಿ ಪ್ರೋತ್ಸಾಹಿಸಿದ್ದಾರೆ. ಸಾಧನೆಗೆ ಯಾವುದೇ ಭಾಷಾ ಮಾಧ್ಯಮ ಅಡ್ಡಿಯಾಗದು. ಇಸ್ರೋದಲ್ಲಿರುವ ನಮ್ಮ ರಾಜ್ಯದವರಲ್ಲಿ ಶೇ.40 ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದಾರೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಪಿ. ವಾಸುದೇವ ರಾವ್ ಹೇಳಿದರು.ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ, ಪತ್ರಿಕೋದ್ಯಮ ಸಮಾಜವನ್ನು ಪರಿವರ್ತನೆ ಮಾಡುವ ಕ್ಷೇತ್ರವಿದು. ಸಮಾಜದಲ್ಲಿ ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಮಾತ್ರ ಭವಿಷ್ಯವಿದೆ ಎಂದರು.ಪತ್ರಕರ್ತೆ ಉಮಾ ಅನಂತ್ ಉಪನ್ಯಾಸ ನೀಡಿ, ಪತ್ರಿಕಾ ವೃತ್ತಿಯಲ್ಲಿ ಸಾಕಷ್ಟು ಸವಾಲುಗಳಿದ್ದು ಅವುಗಳನ್ನು ಎದುರಿಸಿ ಮುನ್ನಡೆದರೆ ಉತ್ತಮ ಪತ್ರಕರ್ತರಾಗಿ ಮೂಡಿಬರಲು ಸಾಧ್ಯ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆ ವಹಿಸಿ ಸಂಘಕ್ಕೆ ಸ್ವಂತ ಕಟ್ಟಡದ ಬೇಡಿಕೆಯನ್ನಿಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿದರು.ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅಂಕ ಗಳಿಸಿದ ಕಲ್ಮಂಜ ಪ್ರೌಢಶಾಲೆಯ ತನುಶ್ರೀ , ಕಾಯರ್ತಡ್ಕ ಪ್ರೌಢಶಾಲೆಯ ಮೇಘನಾ ಹಾಗು ಮಚ್ಚಿನ ಪ್ರೌಢಶಾಲೆಯ ಮೊಹಮ್ಮದ್ ಜಿಯಾದ್ ಅವರನ್ನು ಗೌರವಿಸಲಾಯಿತು. ನೊಂದ 6 ಕುಟುಂಬಗಳಿಗೆ ಮನೋಹರ್ ಬಳಂಜ ಹಾಗೂ ಲಿಖಿತಾ ದಂಪತಿ ನೀಡುವ ‘ದಿತಿ ಸಾಂತ್ವನ ನಿಧಿ’ ಯನ್ನು 6 ಮಂದಿ ಅಶಕ್ತರಿಗೆ ವಿತರಿಸಲಾಯಿತು.
ಕಾರ್ಯದರ್ಶಿ ಗಣೇಶ್ ಬಿ. ಶಿರ್ಲಾಲು ಸ್ವಾಗತಿಸಿದರು. ಉಪಾಧ್ಯಕ್ಷ ಶಿಬಿ ಧರ್ಮಸ್ಥಳ ವಂದಿಸಿದರು. ಜತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಅಚುಶ್ರೀ ಬಾಂಗೇರು, ಹೃಷಿಕೇಶ್ ಧರ್ಮಸ್ಥಳ ಅತಿಥಿಗಳನ್ನು ಪರಿಚಯಿಸಿದರು. ದೀಪಕ್ ಆಠವಳೆ ಸಂದೇಶ ವಾಚಿಸಿದರು.