ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಯಾವ ನಾಯಕರನ್ನೂ ರಾಜಕೀಯವಾಗಿ ನಿರ್ನಾಮ ಮಾಡಿಲ್ಲ. ಯಾವ ನಾಯಕರನ್ನು ತುಳಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಜಾರಕಿಹೊಳಿ ಕುಟುಂಬ ಎಸ್ಸಿ ಮುಖಂಡರ ನಿರ್ನಾಮ ಮಾಡುತ್ತಿದ್ದಾರೆನ್ನುವ ತಮ್ಮಣ್ಣವರ ಆರೋಪಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಇದ್ದುಕೊಂಡು ಬೇರೆಯವರ ಪರವಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕೆಲಸ ಮಾಡಿದ್ದಾರೆ. ಮಹೇಂದ್ರ ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ. ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೇ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ ಎಂದು ತಿರುಗೇಟು ನೀಡಿದರು.ಮತದಾನದಕ್ಕಿಂತ ಎರಡು ದಿನ ಮುಂಚೆ ಮಹೇಂದ್ರ ತಮ್ಮಣ್ಣವರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಚುನಾವಣೆಯಲ್ಲಿ ಅವರ ಸಂಬಂಧಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಮಾಡಿದ್ದಾರೆ. ಕುಡಚಿಯಲ್ಲಿ ಶಂಭು ಕಲ್ಲೋಳಿಕರಗೆ ಕೇವಲ 3 ಸಾವಿರ ಮತಗಳು ಬಂದಿವೆ. ಮಹೇಂದ್ರ ತಮ್ಮಣ್ಣವರ ತಾಕತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.
ಆತ ವಿರೋಧಿ ಕೆಲಸ ಮಾಡಿದರೂ ನಾವು ಗೆದ್ದಿದ್ದೇವೆ. ಪಕ್ಷ ವಿರೋಧಿ ಕೆಲಸ ಮಾಡಿದರೂ ಕಾರ್ಯಕರ್ತರು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಆತನ ಕಾರ್ಯವನ್ನು ಕೊನೆ ಗಳಿಗೆಯಲ್ಲಿ ನಾನೇ ನೋಡಿದ್ದೇನೆ. ಅವನ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಅದೆಲ್ಲವೂ ಈಗ ಮುಗಿದ ಹೋಗಿರುವ ಅಧ್ಯಾಯ ಎಂದರು.ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾನು ಡಿಸಿಎಂ ಹುದ್ದೆಗೆ ಎಂದಿಗೂ ಬೇಡಿಕೆ ಇಟ್ಟಿಲ್ಲ. ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಪಂಚ್ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳೇ ಹೇಳಿದಂತೆ ಈ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬೂಟಾಲಿ, ರಮೇಶ ಶಿಂದಗಿ, ಸಿದ್ದಾರ್ಥ ಸಿಂಗಿ, ಸುನಿಲ ಸಂಕ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
----------------ಅಥಣಿಯಲ್ಲಿ ಕೂಡ ನಮ್ಮ ಪಕ್ಷಕ್ಕೆ ಕಡಿಮೆ ಮತಗಳು ಬಂದಿವೆ. ಇಲ್ಲಿನ ಶಾಸಕರ ಬೆಂಬಲಿಗರು ಹಾಗೂ ಮೂಲ ಕಾಂಗ್ರೆಸ್ ಮುಖಂಡರು ಎಲ್ಲರೂ ಒಟ್ಟಿಗೆ ಶ್ರಮಿಸಿದ್ದರೇ 30 ರಿಂದ 40 ಸಾವಿರ ಅಂತರದ ಮತಗಳು ನಮಗೆ ಬರುತ್ತಿದ್ದವು. ಆದರೆ, ಬಿಜೆಪಿಯಿಂದ ಬಂದವರು ನಮಗೆ ಮೋಸ ಮಾಡಿದರು.
-ಸತೀಶ ಜಾರಕಿಹೊಳಿ, ಸಚಿವ.