ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆ ನಾನು ಯಾವುದೇ ಪತ್ರ ನೀಡಿಲ್ಲ. ಯಾವ ಚುನಾವಣಾ ಅಧಿಕಾರಿ ಬಳಿಯೂ ಹೋಗಿ ತಪ್ಪೊಪ್ಪಿಗೆ ನೀಡಿಲ್ಲ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆ ನಾನು ಯಾವುದೇ ಪತ್ರ ನೀಡಿಲ್ಲ. ಯಾವ ಚುನಾವಣಾ ಅಧಿಕಾರಿ ಬಳಿಯೂ ಹೋಗಿ ತಪ್ಪೊಪ್ಪಿಗೆ ನೀಡಿಲ್ಲ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಎಸ್‌ಐಆರ್‌ನಿಂದ ತೆಗೆದುಹಾಕುವಂತೆ ಸೂಚಿಸಿ, ಬಳಿಕ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ತಪ್ಪೊಪ್ಪಿಕೊಂಡಿದ್ದೇನೆ ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಸತ್ಯವಲ್ಲ. ಸುಳ್ಳು ಹೇಳಿಕೆ ನೀಡಿರುವ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.ನನ್ನ ಪತ್ರದ ಅರ್ಥವನ್ನು ತಿರುಚಿ ಜನರಿಗೆ ದಿಕ್ಕು ತಪ್ಪಿಸಲಾಗುತ್ತಿದೆ. ಚುನಾವಣಾ ಅಧಿಕಾರಿ ಭೇಟಿ ಮಾಡಿ ತಪ್ಪಾಗಿದೆ ಎಂದು ನಾನು ಒಪ್ಪಿಕೊಂಡಿಲ್ಲ. ಯಾವ ಚುನಾವಣಾ ಅಧಿಕಾರಿ ಬಳಿಯೂ ಹೋಗಿ ತಪ್ಪೊಪ್ಪಿಗೆ ನೀಡಿಲ್ಲ. ನಾನು ನೀಡದ ಹೇಳಿಕೆಯನ್ನು ನನ್ನ ಹೆಸರಿಗೆ ಸೇರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಪರಿಶೀಲನೆಗೆ ಮಾತ್ರ ಮನವಿ:
ಬೂತ್ ಮಟ್ಟದ ಪಕ್ಷದ ಏಜೆಂಟರು ನೀಡಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆ ಮಾಹಿತಿಯನ್ನು ಪರಿಶೀಲಿಸಿ, ಅಕ್ರಮ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಪರಿಶೀಲನೆಗೂ ಹಾಗೂ ಹೆಸರು ಅಳಿಸುವುದಕ್ಕೂ ವ್ಯತ್ಯಾಸವಿದೆ ಎಂದ ಅವರು, ನನ್ನ ಪತ್ರದಲ್ಲಿ ಹೆಸರುಗಳನ್ನು ತೆಗೆದುಹಾಕುವಂತೆ ನೇರ ಸೂಚನೆ ನೀಡಿಲ್ಲ. ಬಿಎಲ್‌ಎ 2ಗಳು ನೀಡಿದ ಮಾಹಿತಿಯನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತರು ಸಲ್ಲಿಸಿದ ಪಟ್ಟಿಯಂತೆ ಬಿಂಬಿಸಲಾಗುತ್ತಿದೆ. ಮತದಾರರ ಅರ್ಹತೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಹೊಣೆ ಎಂದರು.ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪ ನಿರಾಕರಿಸಿದ ಅವರು, ನಮ್ಮ ಕಾರ್ಯಕರ್ತರು ಎಲ್ಲರ ಮನೆಗಳಿಗೂ ಭೇಟಿ ನೀಡಿದ್ದಾರೆ. ಒಂದೇ ವಿಳಾಸದಲ್ಲಿ ಹೆಚ್ಚಿನ ಮತದಾರರ ಹೆಸರುಗಳಿದ್ದು, ಸ್ಥಳ ಪರಿಶೀಲನೆ ವೇಳೆ ಅಷ್ಟು ಜನರು ಕಂಡುಬಾರದಿದ್ದಾಗ ಅನುಮಾನ ವ್ಯಕ್ತಪಡಿಸಿ ಪರಿಶೀಲನೆಗೆ ಕೋರಲಾಗಿದೆ. ಇದಕ್ಕೆ ಸಮುದಾಯದ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಕಿಡಿಕಾರಿದರು.ಆಕ್ಷೇಪಣೆ ಸಲ್ಲಿಕೆಯ ವಿಧಾನ ಹಾಗೂ ಸಂಖ್ಯಾಮಿತಿಯ ಉಲ್ಲಂಘನೆ ಕುರಿತು ಪ್ರಶ್ನಿಸಿದಾಗ, ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಬೇಕು. ಅನುಮತಿಗಿಂತ ಹೆಚ್ಚಿನ ಅರ್ಜಿಗಳಿದ್ದರೆ ನಿಯಮದಂತೆ ನಿರ್ಧಾರ ಕೈಗೊಳ್ಳಲಿ. ಸ್ವೀಕರಿಸಬಹುದಾದ ಅರ್ಜಿಗಳ ವಿಚಾರಣೆ ನಡೆಸಲಿ. ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪರಿಶೀಲಿಸುವ ಬದಲು ಬಿಜೆಪಿ ವಿರುದ್ಧ ಆರೋಪ ಮಾಡಿ ರಾಜಕೀಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ದೂರಿದ ಅಭಯ ಪಾಟೀಲ, ಅರ್ಹ ಮತದಾರರ ಹೆಸರು ಉಳಿಯಬೇಕು. ಅಕ್ರಮ ನಮೂದುಗಳಿದ್ದರೆ ಪರಿಶೀಲನೆಯ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.