ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಒಂದಾಗಿರುವ, ಏಕಕಾಲಕ್ಕೆ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಇಲ್ಲದೇ ಅಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಒಂದಾಗಿರುವ, ಏಕಕಾಲಕ್ಕೆ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಇಲ್ಲದೇ ಅಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಪೂಜಾ ಪ್ರಕಾಶ್‌ ಎಂಬುವರು ಕತ್ತಲೆಯಲ್ಲಿರುವ ಬಸ್ ನಿಲ್ದಾಣದ ವಿಡಿಯೋವನ್ನು ರೆಕಾರ್ಡ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ ಎರಡು ಬಸ್ ಶೆಲ್ಟರ್‌ಗಳು ಹಾಗೂ ಶೆಲ್ಟರ್ ಮುಂಭಾಗ ಸಂಪೂರ್ಣ ಕತ್ತಲೆ ಇದೆ. ಹೆಣ್ಣುಮಕ್ಕಳು ಸೇರಿದಂತೆ ಅನೇಕರು ಕತ್ತಲೆಯಲ್ಲಿ ಬಸ್‌ಗಾಗಿ ಕಾಯುತ್ತಾ ನಿಂತಿರುವುದು ಕಂಡು ಬರುತ್ತದೆ.

‘ಬೊಮ್ಮನಹಳ್ಳಿ ಮತ್ತು ಅತ್ತಿಬೆಲೆ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ಸಿಲ್ಕ್‌ಬೋರ್ಡ್ ಬಸ್ ಸ್ಟ್ಯಾಂಡ್‌ನಲ್ಲಿ ಅಗತ್ಯವಿರುವ ಒಂದೇ ಒಂದು ವಿದ್ಯುತ್ ದೀಪ ಇಲ್ಲ. ಈ ನಿಲ್ದಾಣದಲ್ಲಿ ಪ್ರತಿನಿತ್ಯ ಮಹಿಳೆಯರು, ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಅನೇಕರು ಈ ಮಾರ್ಗದಲ್ಲಿ ಓಡಾಡುತ್ತಿರುತ್ತಾರೆ. ಕತ್ತಲೆಯಿಂದ ಕಳ್ಳತನದಂತಹ ಅಪರಾಧ ಪ್ರಕರಣಗಳು, ಅಪಘಾತಗಳು ಆಗುವ ಸಾಧ್ಯತೆಯು ಇರುತ್ತವೆ. ಸಂಬಂಧಪಟ್ಟವರು ಕೂಡಲೇ ಬೀದಿ ದೀಪ ಅಳವಡಿಸಲು ಗಮನ ಹರಿಸಬೇಕು’ ಎಂದು ಪೂಜಾ ಪ್ರಕಾಶ್ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಪೂಜಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅರ್ಚರಾಂ ಎಂಬುವರು, ನನಗೂ ಭಯದ ಅನುಭವ ಆಗಿದೆ. ಅಲ್ಲಿನ ವಾತಾವರಣ ಭೀತಿ ಮೂಡಿಸುವಂತಿದೆ ಎಂದಿದ್ದಾರೆ. ವಿಡಿಯೋವನ್ನು ಎಕ್ಸ್‌ನಲ್ಲೂ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ. ಜಿಬಿಎ ಮತ್ತು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಬೀದಿ ದೀಪ, ಸುರಕ್ಷಿತ ವಾತಾವರಣ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.