ಧರ್ಮಸ್ಥಳ ಸಂಘದಿಂದ ಸಾಲ ಮನ್ನಾ ಇಲ್ಲ

| Published : Sep 04 2025, 01:00 AM IST

ಸಾರಾಂಶ

ಕೆಲವು ದುಷ್ಟ ಶಕ್ತಿಗಳು ಸಾಲ ಮನ್ನಾ ಆಗಿದೆ ಎಂದು ಯೂಟ್ಯೂಬ್ ನಲ್ಲಿ ಅಥವಾ ವಾಟ್ಸಪ್ ಗ್ರೂಪ್ ನಲ್ಲಿ ಎಡಿಟ್ ಮಾಡಿ ಪೋಸ್ಟರ್ ಹಾಕುತ್ತಿದ್ದಾರೆ ಇದನ್ನು ಯಾರು ಸಹ ನಂಬಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಕೆಲವು ದುಷ್ಟ ಶಕ್ತಿಗಳು ಸಾಲ ಮನ್ನಾ ಆಗಿದೆ ಎಂದು ಯೂಟ್ಯೂಬ್ ನಲ್ಲಿ ಅಥವಾ ವಾಟ್ಸಪ್ ಗ್ರೂಪ್ ನಲ್ಲಿ ಎಡಿಟ್ ಮಾಡಿ ಪೋಸ್ಟರ್ ಹಾಕುತ್ತಿದ್ದಾರೆ ಇದನ್ನು ಯಾರು ಸಹ ನಂಬಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ತಾಲೂಕಿನ ಸಿ ಎಸ್ ಪುರ ಗ್ರಾಮದ ಎಸ್ ಎಲ್ ಎನ್ ಮದುವೆ ಮನೆ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಿ.ಎಸ್.ಪುರ ವಲಯ ಇವರುಗಳ ಆಶ್ರಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ನೇರವಾಗಿ ಸಾಲವನ್ನು ನೀಡದೆ ಎಸ್ ಬಿ ಐ ಮೂಲಕ ಸಾಲವನ್ನು 14 ವರ್ಷಗಳಿಂದ 10,000 ಕೋಟಿಗೂ ಅಧಿಕ ವಿತರಣೆ ಮಾಡಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಕಾರಣ ಇದಕ್ಕೆ ಬ್ಯಾಕಿಂಗ್‌ ವ್ಯವಸ್ಥೆಯ ಮೂಗುದಾರವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವರು ವಿನಾಕಾರಣ ಕ್ಷೇತ್ರ ಹೆಸರನ್ನು ಕೆಡಿಸಲು ಯತ್ನಿಸುತ್ತಿರುವುದು ತಮಗೆಲ್ಲ ಗೊತ್ತಿದೆ ಅದೇ ರೀತಿ ಇದು ಸಹ ಷಡ್ಯಂತ್ರವಾಗಿದ್ದು, ನಾವುಗಳು ಸಾಲವನ್ನು ನೀಡಿರುವುದು ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕವಾಗಿಯೇ. ಆದ್ದರಿಂದ ನೀಡಿರುವ ಸಾಲವನ್ನು ಉತ್ತಮ ಕೆಲಸಕ್ಕೆ ಬಳಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು

ಸರ್ವ ಧರ್ಮವನ್ನು ಪ್ರತಿನಿಧಿಸುವ ಸಂಸ್ಥೆಯು ಮೂರು ಲಕ್ಷ ಕುಟುಂಬಗಳಿಗೆ ನೆರವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಹೈನುಗಾರಿಕೆಗೆ, ಸ್ವಯಂ ಉದ್ಯೋಗಕ್ಕೆ ಇನ್ನೂ ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ. ಶ್ರೀ ಕ್ಷೇತ್ರವು ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಮತ್ತು ಆಭಯದಾನ ಇವುಗಳನ್ನು ಗುರುಯಾಗಿ ಇಟ್ಟುಕೊಂಡು ಕೆಲಸ ಮಾಡುತ್ತದೆ. ಧಾರ್ಮಿಕ ಪ್ರಜ್ಞೆ, ಧಾರ್ಮಿಕ ಜಾಗೃತಿ, ಪರಂಪರೆಯನ್ನು ಮಕ್ಕಳಿಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಗುಬ್ಬಿ ತಾಲೂಕಿಗೆ ಸುಮಾರು 60 ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದೆ. 57 ಡೈರಿಗಳಿಗೆ ಅನುದಾನ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 78 ಕೆರೆಗಳ ಪೈಕಿ ಎಂಟು ಕೆರೆಗಳನ್ನು ಗುಬ್ಬಿ ತಾಲೂಕಿನಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ತ್ಯಾವಡೆಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿಯಲು ತಾಯಿಯಿಂದ ಮಾತ್ರ ಸಾಧ್ಯ. ಮಗುವಿನ ಹಾವಭಾವಗಳನ್ನು ತಾಯಿಯೂ ಚನ್ನಾಗಿ ಅರಿತಿರುತ್ತಾಳೆ. ತನ್ನ ಸನ್ನೆಯ ಮೂಲಕ ಹಸಿವನ್ನು ತಾಯಿಗೆ ತೋರಿಸಿಕೊಳ್ಳುತ್ತದೆ. ಅದನ್ನು ಅರಿತು ತಾಯಿ ಹಾಲು ಉಣಿಸುವ ಕೆಲಸ ಮಾಡುತ್ತಾರೆ. ನಾವು ಏನು ಮಾಡುತ್ತೇವೆ ಅದೇ ಕೆಲಸವನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ಪೋಷಕರು ಉತ್ತಮ ದಾರಿಯಲ್ಲಿ ನಡೆದರೆ ನಿಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದರು.

ಸಬ್ ಇನ್ಸ್ಪೆಕ್ಟರ್ ಎನ್ .ಶಿವಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯಾದರೆ ತಾನಾಗಿಯೇ ದೇಶ ಅಭಿವೃದ್ಧಿಯಾಗುತ್ತದೆ ಮಹಿಳೆಯರು ಸ್ವಾವಲಂಬಿಗಳಾಗಿ ಗುಡಿ ಕೈಗಾರಿಕೆಗಳನ್ನು ಅವಲಂಬಿಸಿಕೊಂಡು ತಮ್ಮ ಜೀವನಮಟ್ಟವನ್ನು ವೃದ್ಧಿಸಿಕೊಳ್ಳಬೇಕು. ಉಳಿತಾಯ ಮನೋಭಾವವನ್ನು ಬೆಳೆಸಿಕೊಂಡು ಆರ್ಥಿಕ ಹಿಡಿತ ಮಾಡಿಕೊಂಡು ಮನೆಯಲ್ಲಿ ಆರ್ಥಿಕ ತಜ್ಞರಂತೆ ಮಹಿಳೆಯರು ಕಾರ್ಯನಿರ್ವಹಿಸಬೇಕು. ಇತ್ತೀಚಿನ ದಿನದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿರುವುದು ಕಂಡುಬಂದಿದ್ದು ಸಾರ್ವಜನಿಕರು ಮಹಿಳಾ ಸಹಾಯವಾಣಿಗೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಹಾಯ ಮಾಡಬೇಕು. ಪೋಷಕರು ತಮ್ಮ ಮಕ್ಕಳ ಮನಸ್ಸನ್ನು ಅರಿತು ಶಿಕ್ಷಣ ನೀಡಬೇಕು. ಮನಸ್ಥಿತಿ ಬದಲಾಗಾದರೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷ ಜೆ.ಪಿ.ಬಸವರಾಜು ಗ್ರಾಮ ಪಂಚಾಯಿತಿ ಅಧ್ಯಕ್ಷ ದುರ್ಗಮ್ಮ, ಯೋಜನಾಧಿಕಾರಿ ಜಯಂತಿ.ಕೆ, ಜಿ.ಎಲ್. ಉಷಾ, ಕಲ್ಲೂರು ಸುರೇಶ್, ಗಂಗಾಧರಯ್ಯ, ಪಿಡಿಒ ಯುವರಾಜ್ .ಆರ್, ನಂಜೇಗೌಡ, ಬೆಟ್ಟಸ್ವಾಮಿ, ವೆಂಕಟೇಶ್, ದೇವರಾಜ್, ಅರುಣ್ ಕುಮಾರ್, ಜಯಲಕ್ಷ್ಮಿ, ಮಣಿ ಇತರರಿದ್ದರು.