ಈ ಬಾರಿ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಇಲ್ಲ!

| Published : May 01 2024, 02:01 AM IST

ಸಾರಾಂಶ

ಮಾವು ಇಳಿವರಿ ಕುಸಿತ, ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಬಾರಿ ರೈತರ ತೋಟಕ್ಕೇ ಗ್ರಾಹಕರನ್ನು ಕರೆದೊಯ್ಯುವ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಅನ್ನು ಮಾವು ಅಭಿವೃದ್ಧಿ ಮಂಡಳಿ ರದ್ದು ಪಡಿಸಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಹವಾಮಾನ ವೈಪರಿತ್ಯ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಮಾವು ಉತ್ಪಾದನೆ ಶೇಕಡ 70ರಷ್ಟು ಕುಸಿತಗೊಂಡಿದೆ, ಹೀಗಾಗಿ ಈ ಬಾರಿಯ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಅನ್ನು ಮಾವು ಅಭಿವೃದ್ಧಿ ಮಂಡಳಿ ಕೈಬಿಟ್ಟಿದೆ.

ಮಾವು ಬೆಳೆಗಾರರು ಮತ್ತು ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವುದರ ಜೊತೆಗೆ ಗ್ರಾಹಕರಿಗೆ ರಾಸಾಯನಿಕ ಮುಕ್ತ ಮಾವು ದೊರಕಿಸುವ ಮಹತ್ವದ ಯೋಜನೆಯೇ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ. ಹವಾಮಾನದ ವೈಪರೀತ್ಯದಿಂದ ಮಾವು ಫಸಲು ಕುಂಠಿತ, ಚುನಾವಣಾ ಮಾದರಿ ನೀತಿ ಸಂಹಿತೆ ಅಡ್ಡಿ, ಮಾರುಕಟ್ಟೆಯಲ್ಲಿ ಮಾವಿಗೆ ಬೇಡಿಕೆ ಹೆಚ್ಚಾಗಿರುವುದು ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಆಯೋಜನೆಗೆ ಅಡ್ಡಿಯಾಗಿದೆ. ಆದ್ದರಿಂದ ಈ ಬಾರಿಯೂ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ನಡೆಸುವುದಿಲ್ಲ ಎಂದು ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಈ ಬಾರಿ ಮಾವು ಹಂಗಾಮಿನ ಆರಂಭದಲ್ಲಿ 14ರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಮಾವಿನ ಮರ ಅಕಾಲಿಕವಾಗಿ ಚಿಗುರೊಡೆದು ಹೂವು, ಕಾಯಿಗಳನ್ನು ಉದುರಿಸಿದೆ. ರಾಮನಗರ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಮಾವು ಸಂಪೂರ್ಣ ನಾಶವಾಗಿದೆ. ಹೀಗಾಗಿ ಶೇ.70ರಷ್ಟು ಫಸಲು ನಾಶವಾಗಿದೆ. ಹೊರ ರಾಜ್ಯಗಳಲ್ಲೂ ಬಹುತೇಕ ಇದೇ ಪರಿಸ್ಥಿತಿಯಿದ್ದು, ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ದ್ವಿಗುಣಗೊಂಡಿದೆ.

ಮಲಗೋವ, ರಸಪೂರಿ, ಅಲ್ಫಾನ್ಸ್‌(ಬಾದಾಮಿ), ದಶೇರಿ, ಕೇಸರ್‌, ಸೇಂಧೂರ, ಬಂಗನ್‌ಪಲ್ಲಿ, ಇಮಾಮ್‌ಪಸಂದ್‌ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಬಂಗನ್‌ಪಲ್ಲಿ ₹100, ಬಾದಾಮಿ ₹150- 225, ದಶೇರಿ ₹125- 150, ಸೇಂಧೂರ ₹75- 100 ಇದೆ. ಈ ಹಿನ್ನೆಲೆಯಲ್ಲಿ ಯಾವ ರೈತರು ಕೂಡ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಆಯೋಜನೆಗೆ ಆಸಕ್ತಿ ತೋರುತ್ತಿಲ್ಲ. ಮಾವನ್ನು ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ಬಾಕ್ಸ್...

ರೈತರು, ಗ್ರಾಹಕರಿಗೆ ಅನುಕೂಲ

ಮಾವು ಕೊಳ್ಳಲು ಆಸಕ್ತಿ ಇರುವ ಗ್ರಾಹಕರಿಗೆ ಆನ್‌ಲೈನ್‌ ಮೂಲಕ ಯಾವ ಸ್ಥಳದಲ್ಲಿ ಮಾವು ದೊರೆಯುತ್ತದೆ ಎಂಬುದರ ಮಾಹಿತಿಯನ್ನು ಮಾವು ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುತ್ತದೆ. ಈ ವೆಬ್‌ಸೈಟ್‌ ಮೂಲಕ ₹100 ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಅದಾಗಲೇ ಗುರುತಿಸಿದ ರೈತರ ಮಾವಿನ ತೋಟಕ್ಕೆ ಕರೆದೊಯ್ಯಲಾಗುತ್ತದೆ. ಗ್ರಾಹಕರು ತೋಟದಲ್ಲಿ ಓಡಾಡಿ ತಮಗೆ ಬೇಕಾದ ಹಣ್ಣುಗಳನ್ನು ಕಿತ್ತು ಖರೀದಿಸಲು ಅವಕಾಶವಿದೆ. ಪ್ರತಿ ಗ್ರಾಹಕರು ಕನಿಷ್ಠ 6 ಕೇಜಿ ಮಾವು ಖರೀದಿಸುವುದು ಕಡ್ಡಾಯವಾಗಿತ್ತು.

ರೈತರಿಗೆ ಯಾವುದೇ ದಲ್ಲಾಳಿ ಕಮಿಷನ್‌ ಮತ್ತು ಸಾಗಾಣಿಕೆ ವೆಚ್ಚವಿಲ್ಲದೆ ಸ್ಥಳದಲ್ಲೇ ಮಾವು ಮಾರಾಟ ಮಾಡಿ ನೇರವಾಗಿ ಹಣ ಪಡೆಯಲು ಸಹಕಾರಿಯಾಗಿತ್ತು. ಹಾಗೆಯೇ ಗ್ರಾಹಕರು ನೇರವಾಗಿ ತೋಟಕ್ಕೆ ಹೋಗಿ ಅವರ ಸ್ವಂತ ತೋಟದಲ್ಲಿ ಹಣ್ಣು ಕೀಳುವಂತೆ ಅನುಭವದೊಂದಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಲು ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಅನುಕೂಲ ಒದಗಿಸಿತ್ತು.ಮಾದರಿ ನೀತಿ ಸಂಹಿತೆ ಅಡ್ಡಿ

ಮ್ಯಾಂಗೋ ಟೂರಿಸಂ ಆಯೋಜನೆಗೆ ಚುನಾವಣಾ ನೀತಿ ಸಂಹಿತೆ ಕೂಡ ಅಡ್ಡಿಯಾಗಿದೆ. ಜನರನ್ನು ಸಂಘಟಿಸಿ, ಮಾವು ಬೆಳೆಗಾರರ ತೋಟಕ್ಕೆ ಕರೆದುಕೊಂಡು ಹೋಗುವುದು ಕೂಡ ನೀತಿ ಸಂಹಿತೆ ಉಲ್ಲಂಘನೆ. ಹಾಗೆಯೇ ಮಾವು ಉತ್ಪಾದನೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಅವಕಾಶ ಸಿಕ್ಕರೆ ಜೂನ್‌ನಲ್ಲಿ ಟೂರಿಸಂ ಆಯೋಜನೆ ಬಗ್ಗೆಯೂ ಚಿಂತನೆ ಇದೆ.

-ಸಿ.ಜಿ.ನಾಗರಾಜ್‌, ವ್ಯವಸ್ಥಾಪಕ ನಿರ್ದೇಶಕ, ಮಾವು ಅಭಿವೃದ್ಧಿ ಮಂಡಳಿ.