ಸಾರಾಂಶ
ರಾಮನಗರ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ವಿಷಯದಲ್ಲಿ ಯಾರು ಎಷ್ಟೇ ಕುತಂತ್ರ ಮಾಡಿದರೂ ತಡೆಯಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಗರಸಭೆ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿದ ಅವರು, ನೀವು ಕೊಟ್ಟ ಅವಕಾಶದ ಋಣ ತೀರಿಸುತ್ತೇನೆ. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಉಳಿಸಿಕೊಂಡು ಬೆಂಗಳೂರು ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.ರಾಮನಗರ ಜನರು ಕೆಲವರಿಗೆ ಇಲ್ಲಿಂದ ದೆಹಲಿವರೆಗೆ ಅವಕಾಶ ಕೊಟ್ಟಿದ್ರಿ. ಅವರದು ಖಾಲಿ ಟ್ರಂಕು, ಬರೀ ಮಾತು ಎನ್ನುವಂತಾಗಿದೆ. ಇಪ್ಪತ್ತೈದು ವರ್ಷದ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ. ಇನ್ನು ಮುಂದೆ ಜಿಲ್ಲೆಯನ್ನು ನಾವು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪರಿಶಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂದು ಸಾರಿದ ಅವರು ಎಲ್ಲರಿಗೂ ಸೇರಿದವರು. ನಾನು ಪಕ್ಷದ ಚುಕ್ಕಾಣಿ ಹಿಡಿದ ಬಳಿಕ ಪಕ್ಷದ ಸಭೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಪರಿಪಾಠ ಶುರು ಮಾಡಿದೆ ಎಂದು ಹೇಳಿದರು.ಅಂಬೇಡ್ಕರ್ ಆಶಯದಂತೆ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ರಕ್ಷಣೆ ಮಾಡುತ್ತಿದ್ದು, ತುಳಿತಕ್ಕೊಳಗಾದ ವರ್ಗಗಳನ್ನು ಮೇಲೆತ್ತುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಸಂವಿಧಾನದ ಆಶಯದಂತೆ ಕರ್ತವ್ಯ ನಿರ್ವಹಿಸುತ್ತಿದೆ. ನಾವು ಅಂಬೇಡ್ಕರ್ ಅವರ ಪ್ರತಿಭೆಗೆ ಪೂಜೆ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸಮುದಾಯಗಳ ಪ್ರಾತಿನಿಧ್ಯದ ಸರ್ಕಾರ ಅಧಿಕಾರಕ್ಕೆ ಬಂದಂತೆ. ಆ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ತತ್ವದಡಿ ಆಡಳಿತ ನಡಸುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಿ ಅವರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಜೊತೆಗೆ ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಎರಡು ಕೋಟಿ ಮೀಸಲಾತಿ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಅಂಬೇಡ್ಕರ್ ನೀಡಿರುವ ಸಂವಿಧಾನ ಪವಿತ್ರ ಗ್ರಂಥ. ಎಲ್ಲಾ ಭಾರತೀಯರು ಅದನ್ನು ರಕ್ಷಿಸಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ಡಿಕೆಶಿಗೆ ಸಿಎಂ ಕುರ್ಚಿ ಸನಿಹದಲ್ಲಿದೆ:
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಅಂಬೇಡ್ಕರ್ ಆಶಯಗಳಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ತತ್ವದಡಿ ನಗರಸಭೆ ಆಡಳಿತ ನಡೆಸುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರಿಗೆ ಸವಲತ್ತುಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದೇವೆ. ಇಷ್ಟೇ ಅಲ್ಲದೆ ನಗರದ ನಾಗರೀಕರಿಗೆ ಮೂಲಸೌಕರ್ಯ ಕಲ್ಪಿಸಲು ನಗರಸಭೆ ಶ್ರಮಿಸುತ್ತಿದೆ ಎಂದರು.ಈ ಕ್ಷೇತ್ರವನ್ನು 25 ವರ್ಷಗಳಿಂದ ಪ್ರತಿನಿಧಿಸಿದವರು ರಾಮನಗರದ ಅಭಿವೃದ್ಧಿಗಾಗಿ ಏನನ್ನು ಮಾಡಲಿಲ್ಲ.
ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರದ ಚಿತ್ರಣ ಬದಲಿಸುವ ಭರವಸೆ ನೀಡಿದ್ದರು. ಅವರ ಮಾತಿಗೆ ಬದ್ದರಾಗಿ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿ ಮಾತು ಈಡೇರಿಸಿದ್ದೇವೆ. ಈಗ 165 ಕೋಟಿ ಅರ್ಕಾವತಿ ನದಿ ಪುನರುಜ್ಜೀವನ, 80 ಕೋಟಿಗೂ ಹೆಚ್ಚು ಮೊತ್ತದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ನಗರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಕೆಲವರು ಒಂದು ಬಾರಿ ಗೆದ್ದವರು ಮುಖ್ಯಮಂತ್ರಿಯಾದರು. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿಗೆ ತುಂಬಾ ಸನಿಹದಲ್ಲಿದೆ. 8 ಬಾರಿ ಗೆದ್ದು ಶಾಸಕರಾಗಿರುವ ಅವರಿಗೆ ಆಡಳಿತದ ಅನುಭವ ಇದೆ. ಮುಂದೆ ಮುಖ್ಯಮಂತ್ರಿಯಾದ ಮೇಲೆ ರಾಮನಗರ ಮಾತ್ರವಲ್ಲದೆ ನಾಡು ಅಭಿವೃದ್ಧಿಯತ್ತ ಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೆ.ಶೇಷಾದ್ರಿ ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಉಪನ್ಯಾಸ ನೀಡಿದರು. ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ , ಎಚ್.ಸಿ.ಬಾಲಕೃಷ್ಣ , ಪಿ.ನರೇಂದ್ರ ಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಎಸ್.ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾಧ್ಯಕ್ಷ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮತ್ತಿತರರು ಉಪಸ್ಥಿತರಿದ್ದರು.11ಕೆಆರ್ ಎಂಎನ್ 7,8.ಜೆಪಿಜಿ
7.ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.8.ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಗ್ರಹಕ್ಕೆ ಡಿ.ಕೆ.ಶಿವಕುಮಾರ್ ಪುಷ್ಪಾರ್ಚನೆ ಮಾಡಿದರು.