ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ಟರೂ ಗೆಲ್ಲುವುದು ಎನ್‌ಡಿಎ: ಜೋಶಿ

| Published : Nov 10 2024, 01:35 AM IST

ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ಟರೂ ಗೆಲ್ಲುವುದು ಎನ್‌ಡಿಎ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ಸಿಗರು ಯಾವತ್ತೂ ಜನರನ್ನು ಕನ್ವಿಯನ್ಸ್ ಮಾಡುವುದಿಲ್ಲ; ಬರೀ ಕನ್‌ಫ್ಯೂಸ್ ಮಾಡುವುದರಲ್ಲೇ ಇರುತ್ತಾರೆ. ಅದು ಕಾಂಗ್ರೆಸಿಗರ ಡಿಎನ್‌ಎದಲ್ಲೇ ಬಂದಿದೆ.

ಹುಬ್ಬಳ್ಳಿ:

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ "ಟೋಕನ್ " ಮೊರೆ ಹೋಗಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆದರೆ ಎಷ್ಟೇ ಟೋಕನ್‌ ಕೊಟ್ಟರೂ ಗೆಲ್ಲುವುದು ಮಾತ್ರ ಎನ್‌ಡಿಎ ಎಂದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶತಾಯ ಗತಾಯ ಉಪ ಚುನಾವಣೆ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ಹೇಳಿದರು.

ಟೋಕನ್ ಹಂಚಿದ ಕಾಂಗ್ರೆಸ್ ಅದನ್ನು ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದ ಸಚಿವರು, ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದರು.

ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲುವುದು ನಾವೇ ಎಂದ ಜೋಶಿ, ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ದಿಕ್ಕು ತಪ್ಪಿಸುವ ಅಭಿಯಾನ:

ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷ "ಜನರ ದಿಕ್ಕು ತಪ್ಪಿಸೋ ಅಭಿಯಾನ " ಶುರು ಮಾಡಿದೆ ಎಂದು ಆರೋಪಿಸಿದ ಅವರು, ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ಮಿಸ್ ಗೈಡ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ಸಿಗರು ಯಾವತ್ತೂ ಜನರನ್ನು ಕನ್ವಿಯನ್ಸ್ ಮಾಡುವುದಿಲ್ಲ; ಬರೀ ಕನ್‌ಫ್ಯೂಸ್ ಮಾಡುವುದರಲ್ಲೇ ಇರುತ್ತಾರೆ. ಅದು ಕಾಂಗ್ರೆಸಿಗರ ಡಿಎನ್‌ಎದಲ್ಲೇ ಬಂದಿದೆ ಎಂದು ಟೀಕಿಸಿದರು.

ಈಗ ವಕ್ಫ್ ವಿಚಾರದಲ್ಲೂ ಕಾಂಗ್ರೆಸ್ ಜನರನ್ನು ಕನ್‌ಫ್ಯೂಸ್ ಮಾಡುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ. ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸಿನವರು ಬುದ್ಧಿ ಇದ್ದು ಮಾಡುತ್ತಿದ್ದಾರೋ, ಬುದ್ಧಿ ಇಲ್ಲದೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಿಜೆಪಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುತ್ತದೆ ಎನ್ನುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಕ್ಫ್ ಆಸ್ತಿ ಸಂರಕ್ಷಿಸುವ ಕೆಲಸವನ್ನು ಬಿಜೆಪಿ ಹಿಂದೆಯೂ ಮಾಡಿದೆ, ಮುಂದೆಯೂ ಮಾಡುತ್ತದೆ. ಆದರೆ, ವಕ್ಫ್ ಅಥವಾ ವಕ್ಫ್ ಹೆಸರಲ್ಲಿ ಭೂಗಳ್ಳರು ಬಡವರ, ರೈತರ, ಜನಸಾಮಾನ್ಯರ ಆಸ್ತಿ ಕಬಳಿಸಲು ಹೊರಟರೆ ಬಿಡುವುದಿಲ್ಲ ಎಂದು ಜೋಶಿ ಎಚ್ಚರಿಸಿದರು.

ಅನ್ವರ್ ಮಾನಪ್ಪಾಡಿ ವರದಿ ಪ್ರಕಾರ ಕಾಂಗ್ರೆಸಿನ ಅತ್ಯಂತ ಪ್ರಭಾವಿ ನಾಯಕರೇ ವಕ್ಫ್‌ನ 29000 ಎಕರೆ ಆಸ್ತಿ ಹೊಡೆದಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಸಹ ಮಾನಪ್ಪಾಡಿ ವರದಿ ಪರಿಶೀಲನೆ ಮಾಡಿ ಮತ್ತೊಂದು ವರದಿ ಕೊಟ್ಟಿದೆ. ವಕ್ಫ್ ಆಸ್ತಿ ದುರುಪಯೋಗ ಆಗಿದೆ ಎಂಬ ಅಂಶ ಅದರಲ್ಲಿದೆ ಎಂದು ಜೋಶಿ ತಿಳಿಸಿದರು.