ಸಾರಾಂಶ
ಧಾರವಾಡ: ದೇಶದ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ. ವಿಜ್ಞಾನ- ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದು ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಉಪನಿರ್ದೇಶಕ ಗಿರೀಶ ಪದಕಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ-2025’ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಿಂದು ಸಂಕೀರ್ಣ ಪರಿಸ್ಥಿತಿಯಲ್ಲಿದ್ದು ಸ್ವಾವಲಂಬಿ ಬದುಕಿನಿಂದ ವಿಮುಖರಾಗುತ್ತಿದ್ದಾರೆ. ಒತ್ತಡ, ಖಿನ್ನತೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರವೇಶ ಪಡೆದ ಮಕ್ಕಳು ಮಧ್ಯದಲ್ಲಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ವೈಯಕ್ತಿಕ ಶುಚಿತ್ವ, ಸಾತ್ವಿಕ ಆಹಾರ ಸೇವನೆಯ ಪರಿಕಲ್ಪನೆಯೂ ಇಲ್ಲದಾಗಿದೆ. ಹಾಗಾಗಿ ಪಾಲಕರು, ಶಿಕ್ಷಕರು, ಅವರಲ್ಲಿ ನೈತಿಕ ಪ್ರಜ್ಞೆ, ಮೌಲ್ಯಾಧಾರಿತ ಜೀವನ ವಿಧಾನ ಕಲಿಸಬೇಕಿದೆ ಎಂದು ಹೇಳಿದರು.
ಆದರ್ಶ ಶಿಕ್ಷಕ ದಂಪತಿ ಪ್ರಶಸ್ತಿ ಪುರಸ್ಕೃತ ಡಾ. ಪ್ರಕಾಶ ಭೂತಾಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಿಕ್ಷಣದಲ್ಲಿ ಒಂದು ದೊಡ್ಡ ಶಕ್ತಿ ಇದೆ. ನಾನು ಯಾವುದೇ ಅಕ್ಷರ ಸಂಸ್ಕೃತಿ ಇಲ್ಲದ ಅವಿಭಕ್ತ ಕುಟುಂಬದಿಂದ ಬಂದವನು. ನಮ್ಮ ಹಿರಿಯರು ಪಟ್ಟ ಶ್ರಮದಿಂದ ಇಲಾಖೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಕುಟುಂಬವು ನನಗೆ ಸಾಮರಸ್ಯದ ಬದುಕನ್ನು ಕಲಿಸಿದೆ. ನನ್ನ ಏಳ್ಗೆಯಲ್ಲಿ ನನ್ನ ಪತ್ನಿ ಮಹಾಲಕ್ಷ್ಮಿ ಸಿ.ಎನ್. ಪಾತ್ರ ದೊಡ್ಡದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು. ದತ್ತಿದಾನಿಗಳ ಪರವಾಗಿ ಇಂದಿರಾ ಕುಂದಗೋಳ ಮಾತನಾಡಿದರು. ಡಾ. ಲಿಂಗರಾಜ ರಾಮಾಪೂರ ಪರಿಚಯಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.